ಫೈನಾನ್ಸ್ ಕಂಪನಿಗೆ ನುಗ್ಗಿ 23 ಲಕ್ಷ ರೂ. ಮೌಲ್ಯದ ವಸ್ತು ಲೂಟಿ

1
Published on

ಬೆಂಗಳೂರು: ಮಾರತಹಳ್ಳಿಯ ಯುನಿಮೋನಿ ಫೈನಾನ್ಸಿಯಲ್ ಸರ್ವೀಸಸ್ ಲಿ. ಕಂಪನಿಯ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು ಗ್ಯಾಸ್ ಕಟ್ಟರ್‌ನಿಂದ ಲಾಕರ್ ಮುರಿದು ಚಿನ್ನಾಭರಣ, ವಿದೇಶಿ ಕರೆನ್ಸಿ ಸೇರಿ 23 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. 

ಮಾರತಹಳ್ಳಿಯ ಯುನಿಮೋನಿ ಫೈನಾನ್ಸಿಯಲ್ ಸರ್ವೀಸಸ್ ಲಿ. ಕಂಪನಿಯು ಜನರಿಗೆ ಚಿನ್ನದ ಮೇಲೆ ಸಾಲ ನೀಡುವುದು, ವಿದೇಶಿ ಕರೆನ್ಸಿ ವರ್ಗಾವಣೆ ಸೇರಿ ಇತರ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಕಳೆದ 6 ವರ್ಷಗಳಿಂದ ಮಾರತ್‌ಹಳ್ಳಿಯ ಯುನಿಮೋನಿ ಕಂಪನಿಯಲ್ಲಿ ಅಸಿಸ್ಟೆಂಟ್ ಬ್ಯಾಂಕ್ ಇಂಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ರವೀಂದ್ರ ಶೆಟ್ಟಿ ನ.28ರಂದು ಮಧ್ಯಾಹ್ನ 2 ಗಂಟೆಗೆ ಕಂಪನಿಯ ರೋಲಿಂಗ್ ಶೆಟರ್ ಮುಚ್ಚಿ ಮನೆಗೆ ಹೋಗಿದ್ದರು. ನ.30ರಂದು ಬೆಳಗ್ಗೆ ಕಂಪನಿಯ ರೋಲಿಂಗ್ ಶೆಟರ್ ಲಾಕ್ ತೆರೆದು ಒಳಹೋಗಿ ನೋಡಿದಾಗ ಕಳ್ಳರ ಕೃತ್ಯ ಬೆಳಕಿಗೆ ಬಂದಿದೆ.

ಕಳ್ಳತನ ಹೇಗೆ ? : ರವೀಂದ್ರ ಶೆಟ್ಟಿ ಕಂಪನಿ ಬಾಗಿಲು ಮುಚ್ಚಿ ಹೋಗಿರುವುದನ್ನು ಗಮನಿಸಿದ ಕಳ್ಳರು ಕಂಪನಿಯ ಗೋಡೆ ಕೊರೆದು ಒಳ ನುಗ್ಗಿದ್ದರು. ನಂತರ ಸ್ಟ್ರಾಂಗ್ ರೂಂನ ಬಾಗಿಲು ಮುರಿದು ಗ್ಯಾಸ್ ಕಟ್ಟರ್‌ನಿಂದ ಲಾಕರ್ ಬಾಗಿಲನ್ನು ತುಂಡು ಮಾಡಿ ಲಾಕರ್ ಒಳಗಿದ್ದ 22 ಲಕ್ಷ ರೂ. ಮೌಲ್ಯದ 468.15 ಗ್ರಾಂ ಚಿನ್ನಾಭರಣ, 500 ವಿದೇಶಿ ಕರೆನ್ಸಿ, 84 ಸಾವಿರ ರೂ. ಸೇರಿ 23 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ತಮ್ಮ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಕಂಪನಿಗೆ ಅಳವಡಿಸಿದ್ದ ಡಿವಿಆರ್‌ನ್ನು ತೆಗೆದುಕೊಂಡು ಹೋಗಿರುವ ಕಳ್ಳರು, ಸಿಸಿಕ್ಯಾಮರಾ ಬೇರೆಡೆ ತಿರುಗಿಸಿ ಅದಕ್ಕೆ ಅಳವಡಿಸಿದ್ದ ವೈಯರ್‌ನ್ನು ಕಿತ್ತು ಹಾಕಿದ್ದಾರೆ. ಆದರೆ, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟಿಂಗ್ ಯಂತ್ರ ಕಂಪನಿ ಕಚೇರಿಯಲ್ಲೇ ಬಿಟ್ಟು ಹೋಗಿರುವ ಕಳ್ಳರ ನಡೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.  ಎಚ್‌ಎಎಲ್ ಠಾಣೆ ಪೊಲೀಸರು ಎ್ಐಆರ್ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಕಂಪನಿ ಬಗ್ಗೆ ಮಾಹಿತಿ ಇರುವವರೇ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಹೀಗಾಗಿ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net