ಕಾರಿನಲ್ಲಿಟ್ಟಿದ್ದ 2 ಲಕ್ಷ ರೂ ಕಳವು

Gold Theft
Published on

ಕಾರ್ಕಳ: ನಗರದ ಕಾಬೆಟ್ಟು ಜಂಕ್ಷನ್‌ನಲ್ಲಿ ನಿಲ್ಲಿಸಿದ್ದ ಕಾರಿನಿಂದ ಶನಿವಾರ ಮಧ್ಯಾಹ್ನ ವ್ಯಕ್ತಿಯೋರ್ವ ರೂ.2 ಲಕ್ಷವನ್ನು ಕಳವು ಮಾಡಿ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಅತ್ತೂರು ಗುಂಡ್ಯಡ್ಕದ ವಿನ್ಸೆಂಟ್ ನವೀನ್ ಕ್ಯಾಸ್ತಲಿನೋ ಎಂಬುವರ ಪತ್ನಿ ಮಾಲಿನಿ(29) ಈ ಕುರಿತು ನಗರ ಠಾಣೆಗೆ ದೂರು ನೀಡಿದ್ದಾರೆ. ಅತ್ತೂರು ಗುಂಡ್ಯಡ್ಕ ಶ್ರೀದೇವಿ ಶಿಲ್ಪಕಲಾ ಕೇಂದ್ರದ ಮಾಲೀಕ ಎನ್.ಅಶೋಕ್ ಪತ್ನಿ ಪದ್ಮಾವತಿ ಎಂಬುವರು ಅನಂತಶಯನ ದೇವಳ ರಸ್ತೆ ಪಕ್ಕದಲ್ಲಿ ಇರುವ ಸಿಂಡಿಕೇಟ್ ಬ್ಯಾಂಕ್‌ನಿಂದ 2ಲಕ್ಷ ರೂ ಡ್ರಾ ಮಾಡಿ, ಮಾಲಿನಿ ಅವರಿಗೆ ಹಸ್ತಾಂತರಿಸಿದ್ದರು.

ಆ ಹಣದೊಂದಿಗೆ ಮಾಲಿನಿ ಓಮ್ನಿ ಕಾರಿನಲ್ಲಿ ಕ್ರೈಸ್ಟ್‌ಕಿಂಗ್ ರಸ್ತೆ ಮೂಲಕ ಕಾಬೆಟ್ಟು ತಲುಪಿದ್ದಾರೆ. ಫ್ಯಾಕ್ಟರಿಗೆ ರೇಶನ್ ಖರೀದಿಸಲೆಂದು ಕಾಬೆಟ್ಟು ಜಂಕ್ಷನ್ ಬಳಿ ಕಾರು ನಿಲ್ಲಿಸಿದ್ದರು. ಕಾರಿನ ಚಾಲಕ ಗೋಪಾಲ ರೇಶನ್ ತುಂಬಿಸಲು ಕಾರಿನ ಹಿಂಬದಿಯ ಡೋರ್ ತೆರೆದಿದ್ದಾರೆ. ಕಾರಿನಲ್ಲಿ ಇದ್ದ ವಿಶ್ವನಾಥ ಪೂಜಾರಿ ಬಾಯಾರಿಕೆ ಆಯಿತೆಂದು ತಂಪು ಪಾನೀಯ ಕುಡಿಯಲು ಅಂಗಡಿಗೆ ತೆರಳಿದ್ದಾರೆ. ಹಣವಿದ್ದ ಪ್ಲಾಸ್ಟಿಕ್ ಕವರನ್ನು ಕಾರಿನ ಮಧ್ಯದ ಸೀಟಿನಲ್ಲಿ ಇರಿಸಿದ ಮಾಲಿನಿ ರೇಶನ್ ಬಿಲ್ ಪಾವತಿಸಲು ಅಂಗಡಿ ಸಮೀಪಕ್ಕೆ ಹೋಗಿದ್ಧಾರೆ. ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಸಮೀಪಕ್ಕೆ ಬಂದು ಕಾರಿನೊಳಗೆ ಕೈಹಾಕಿ ಹಣ ಲಪಟಾಯಿಸಿದ್ದಾನೆ. ಅಪರಿಚಿತ ಹಣದ ಕಟ್ಟಿಗೆ ಕೈಹಾಕಿದ್ದನ್ನು ಮಾಲಿನಿ ನೋಡಿ ಚೀರಾಡಿ ಇತರರ ಗಮನ ಸೆಳೆದಿದ್ದರೂ, ಅಷ್ಟರಲ್ಲೇ ಕಳ್ಳ ತನ್ನ ಕೈಚಳಕ ತೋರಿಸಿ ಅದೇ ದಾರಿಯಲ್ಲಿ ಬಂದ ಬೈಕ್ ಏರಿ ಪರಾರಿಯಾಗಿದ್ದಾನೆ. ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net