

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ತಲಪಾಡಿ ಸಮೀಪದ ಕೆ.ಸಿ.ರೋಡ್ ಜಂಕ್ಷನ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಗೆ ಶುಕ್ರವಾರ ಮಧ್ಯಾಹ್ನ ನುಗ್ಗಿದ ಆಗಂತುಕರು ಸಿಬಂದಿ ಮತ್ತು ಗ್ರಾಹಕರಿಗೆ ಪಿಸ್ತೂಲು, ತಲ್ವಾರು, ಚಾಕು ತೋರಿಸಿ ಬೆದರಿಸಿ ನಗದು ಮತ್ತು ಕೋಟ್ಯಂತರ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದಾರೆ.
ಒಂದು ಗಂಟೆ ಹೊತ್ತಿಗೆ ಸುಮಾರು 25ರಿಂದ 30 ವರ್ಷ ಪ್ರಾಯದ ಐವರು ಆಗಂತುಕರು ಬ್ಯಾಂಕ್ ಗೆ ನುಗ್ಗಿ ಕಚೇರಿಯಲ್ಲಿದ್ದ ಸಿಬ್ಬಂದಿಗೆ ಪಿಸ್ತೂಲ್ ಮತ್ತು ಮಾರಕಾಯುಧಗಳನ್ನು ತೋರಿಸಿ ಸುಮಾರು 10ರಿಂದ 12 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಐದು ಲಕ್ಷ ನಗದು ದರೋಡೆಗೈದು ಮಂಗಳೂರು ಕಡೆ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿ ಕೋಟೆಕಾರ್ ಬೀರಿಯಲ್ಲಿದ್ದು ಕೆ.ಸಿ.ರೋಡ್ ಜಂಕ್ಷನ್ ನಲ್ಲಿರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಶಾಖೆ ಹೊಂದಿದೆ. ಶುಕ್ರವಾರ ಮಧ್ಯಾಹ್ನ ಸ್ಥಳೀಯ ಅಂಗಡಿಯವರು ಮಸೀದಿಗೆ ಹೋಗಿದ್ದರಿಂದ ಜನ ಸಂಚಾರ ಕಡಿಮೆಯಿತ್ತು. ಈ ಸಂದರ್ಭ ದರೋಡೆಕೋರರು ಬ್ಯಾಂಕಿಗೆ ನುಗ್ಗಿದ್ದಾರೆ. ಸಿಬ್ಬಂದಿ ಬೊಬ್ಬೆ ಹಾಕಿದ್ದನ್ನು ಕೇಳಿಸಿಕೊಂಡ ಬ್ಯಾಂಕಿನ ಕೆಳಗಿನ ಅಂತಸ್ತಿನ ಬೇಕರಿಯಲ್ಲಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳು ಬ್ಯಾಂಕಿಗೆ ಓಡಿ ಬಂದಿದ್ದು ಈ ಸಂದರ್ಭ ದರೋಡೆಕೋರರು ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ದರೋಡೆಕೋರರು ಕೃತ್ಯ ಎಸಗಿದ ಬಳಿಕ ಕಪ್ಪು ಬಣ್ಣದ ಫಿಯಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಎಸಿಪಿ ಧನ್ಯ ನಾಯಕ್ ನೇತೃತ್ವದ ಪೊಲೀಸರ ತಂಡ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಪೀಕರ್ ಖಾದರ್ ಭೇಟಿ ನೀಡಿ ಆರೋಪಗಳನ್ನು ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬ್ಯಾಂಕಿನಲ್ಲಿ ಸಿಸಿ ಕ್ಯಾಮರಾ ಇದೆಯಾದರೂ ಹಾಳಾಗಿತ್ತು. ಇದನ್ನು ಸರ್ವೀಸ್ ಮಾಡುತ್ತಿದ್ದಾಗಲೇ ದರೋಡೆ ನಡೆದಿದೆ. ಆರೋಪಿಗಳು ಪರಾರಿಯಾಗುತ್ತಿರುವ ದೃಶ್ಯ ಹೊರಗಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಶುಕ್ರವಾರ ಮಧ್ಯಾಹ್ನ ಅಲ್ಲದೆ ಸಿಸಿ ಕ್ಯಾಮರಾ ಸರ್ವೀಸ್ ಮಾಡುವಾಗಲೇ ಘಟನೆ ನಡೆದಿದ್ದು ಬ್ಯಾಂಕ್ ಹಾಗೂ ಪರಿಸರದ ಬಗ್ಗೆ ಸಮಗ್ರ ಮಾಹಿತಿ ಇರುವವರೇ ಕಾರ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.