

ಪುತ್ತೂರು ಗ್ರಾಮಾಂತರ: ಮುಂಡೂರು ಗ್ರಾಪಂ ವ್ಯಾಪ್ತಿಯ ಸರ್ವೆ ಗ್ರಾಮದ ದರ್ಬೆ ಮತ್ತು ರೆಂಜಲಾಡಿಯಲ್ಲಿರುವ ಎರಡು ಅಂಗನವಾಡಿ ಕೇಂದ್ರಗಳಿಂದ ಬುಧವಾರ ರಾತ್ರಿ ಅಡುಗೆ ಪಾತ್ರೆಗಳ ಕಳವು ನಡೆದಿದೆ. ಸರ್ವೆ ಗ್ರಾಮದ ದರ್ಬೆ ಅಂಗನವಾಡಿ ಕೇಂದ್ರದಿಂದ ಇದೀಗ 5ನೇ ಬಾರಿಗೆ ಕಳ್ಳತನ ನಡೆದಿರುವುದಾಗಿ ಮಾಹಿತಿ ಲಭಿಸಿದೆ.
ದರ್ಬೆ ಅಂಗನವಾಡಿ ಕಟ್ಟಡದ ಹಿಂಭಾಗದ ಮಾಡಿನ ಹೆಂಚು ತೆಗೆದು ಒಳನುಗ್ಗಿದ್ದ ಕಳ್ಳರು ಅಂಗನವಾಡಿ ಕೇಂದ್ರದೊಳಗಿದ್ದ ಎಲ್ಲ ಅಡುಗೆ ಪಾತ್ರೆಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ ಸಂಕೋಲೆಯಲ್ಲಿ ಕಟ್ಟಿ ಬೀಗ ಹಾಕಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಅನ್ನು ಕಳವು ಮಾಡಲು ವಿಫಲ ಯತ್ನ ನಡೆಸಿದ್ದಾರೆ. ಸ್ಥಳದಲ್ಲಿ ಮದ್ಯದ ಖಾಲಿ ಬಾಟಲಿಗಳೂ ಪತ್ತೆಯಾಗಿವೆ.
ಸಂಪ್ಯ ಪೊಲೀಸ್ ಠಾಣೆಯ ಎಸ್ಐ ಜಂಬೂರಾಜ್ ಮಹಾಜನ್, ಅಪರಾಧ ವಿಭಾಗದ ಎಸ್ಐ ಸುಷ್ಮಾ ಜಿ.ಭಂಡಾರಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ರೆಂಜಲಾಡಿ ಅಂಗನವಾಡಿ ಕೇಂದ್ರದ ಜಗಲಿಯಲ್ಲಿ ಇಟ್ಟಿದ್ದ ಬಕೆಟ್ ಮತ್ತು ಕೊಡಪಾನವನ್ನು ಕಳ್ಳರು ಕಳವು ಮಾಡಿದ್ದಾರೆ.