ಸಚಿವರ ಸ್ವಾಗತ ವೇಳೆ ಕಿಸೆಗಳ್ಳರ ಕೈಚಳಕ!

pickpocket
Published on

ಪಡುಬಿದ್ರಿ: ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಸುನೀಲ್‌ಕುಮಾರ್ ಅವರನ್ನು ಸ್ವಾಗತಿಸುವ ಸಂದರ್ಭ ಜನಜಂಗುಳಿಯ ಲಾಭ ಪಡೆದ ಕಳ್ಳರು ಹಲವರ ಜೇಬಿಗೆ ಕತ್ತರಿ ಹಾಕಿದ್ದಾರೆ.
ಶುಕ್ರವಾರ ಹೆಜಮಾಡಿಯಲ್ಲಿ ಸಚಿವರನ್ನು ಸ್ವಾಗತಿಸುವ ವೇಳೆ ನೂಕುನುಗ್ಗಲಿನ ಲಾಭ ಪಡೆದ ಜೇಬುಕಳ್ಳರು, ಗುತ್ತಿಗೆದಾರ ಬ್ರಹ್ಮಾವರದ ಜೀವನ್ ಶೆಟ್ಟಿ ಅವರ ಜೇಬಿನಿಂದ 50 ಸಾವಿರ ರೂ. ಹಾಗೂ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್ ಜೇಬಿನಿಂದ 28 ಸಾವಿರ ರೂ. ನಗದು ಎಗರಿಸಿದ್ದಾರೆ. ಈ ಹಿಂದೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಡಿ.ವಿ. ಸದಾನಂದ ಗೌಡ ಅವರನ್ನು ಇಲ್ಲಿ ಸ್ವಾಗತಿಸುವ ವೇಳೆಯೂ ಕಳ್ಳತನ ನಡೆದಿತ್ತು. ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಮೊದಲೇ ಈ ಬಗ್ಗೆ ಎಚ್ಚರಿಸಿದ್ದರೂ, ಅದನ್ನು ಮರೆತು ಸ್ವಾಗತಿಸುವ ಉತ್ಸಾಹದಲ್ಲಿ ಮತ್ತೆ ಹಣ ಕಳೆದುಕೊಳ್ಳುವಂತಾಗಿದೆ. ಘಟನೆಗೆ ಸಂಬಂಧಿಸಿ ಬೆಳ್ಮಣ್‌ನಲ್ಲಿ ಶಂಕಿತ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net