

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಬೇಲೂರ ಕೈಗಾರಿಕಾ ಪ್ರದೇಶದ ಟಾಟಾ ಹಿಟಾಚಿ ಕಂಪನಿಯಲ್ಲಿ ಇತ್ತೀಚೆಗೆ ನಡೆದಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಹೊಸ ಟೈರ್‌ಗಳು ಹಾಗೂ ಬ್ಯಾಟರಿಗಳ ಕಳ್ಳತನ ಪ್ರಕರಣವನ್ನು ಗರಗ ಠಾಣೆ ಪೊಲೀಸರು ಭೇದಿಸಿದ್ದಾರೆ. ಅದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಕಾರ್ಮಿಕ ಇನ್ನಿಬ್ಬರ ನೆರವಿನಿಂದ ಹೊಸ ಟೈರ್‌ಗಳು ಹಾಗೂ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದ. ಗರಗ ವೃತ್ತದ ಸಿಪಿಐ ಸಮೀರ ಮುಲ್ಲಾ, ಗರಗ ಠಾಣೆ ಪಿಎಸ್‌ಐ ಸಿದ್ರಾಮಪ್ಪ ಉನ್ನದ ಹಾಗೂ ಸಿಬ್ಬಂದಿ ತಾಂತ್ರಿಕ ನೆರವಿನಿಂದ ಕಳ್ಳತನ ಪ್ರಕರಣ ಭೇದಿಸಿದ್ದಾರೆ. ಕಳ್ಳತನವಾಗಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ತಂಡಕ್ಕೆ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ ಬಹುಮಾನ ಘೋಷಿಸಿದ್ದಾರೆ.