ಅಣ್ಣನ ಮನೆಯಲ್ಲೇ ತಮ್ಮನಿಂದ ಕಳ್ಳತನ

Published on

ಮೈಸೂರು: ಅಣ್ಣನ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ತಮ್ಮನನ್ನು ಬಂಧಿಸಿರುವ ಜಿಲ್ಲಾ ಅಪರಾಧ ಪತ್ತೆ ದಳ ಪೊಲೀಸರು ಸುಮಾರು 14 ಲಕ್ಷ ರೂ.ಬೆಲೆ ಬಾಳುವ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ನಂಜನಗೂಡು ತಾಲೂಕು ಹುಲ್ಲಹಳ್ಳಿ ಬಳಿಯ ಮಡಕೆಹುಂಡಿಯ ರಾಜೇಂದ್ರ ಬಂಧಿತ ಆರೋಪಿ.

ರಾಜೇಂದ್ರ ಅವರ ಅಣ್ಣ ಕೃಷ್ಣನಾಯಕ ಹಾಗೂ ಕುಟುಂಬದವರು ಜುಲೈ 7ರಂದು ಬೆಳಗ್ಗೆ ಮನೆಗೆ ಬೀಗ ಹಾಕಿ ಜಮೀನಿಗೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ವಾಪಸ್ ಬಂದು ನೋಡಿದಾಗ ಯಾರೋ ಮನೆಯ ಹೆಂಚು ತೆಗೆದು ಒಳ ನುಗ್ಗಿ ಸುಮಾರು 90 ಗ್ರಾಂ ಚಿನ್ನಾಭರಣ, 5.15 ಲಕ್ಷ ರೂ.ನಗದು ಕಳವು ಮಾಡಿದ್ದಾರೆ ಎಂದು ಕೃಷ್ಣನಾಯಕರ ಪತ್ನಿ ಸಣ್ಣ ತಾಯಮ್ಮ ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರು, ಅಪರಾಧ ಪತ್ತೆ ದಳ ನಿಯೋಜಿಸಿದ್ದರು. ತನಿಖಾ ತಂಡ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಕೃಷ್ಣನಾಯಕರ ತಮ್ಮ ರಾಜೇಂದ್ರನನ್ನು ಆಗಸ್ಟ್ 8ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನಿಂದ 90 ಗ್ರಾಂ ಆಭರಣ, 5 ಲಕ್ಷ ರೂ.ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾದ ಸಿಬ್ಬಂದಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net