ಮೈಸೂರು: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು ಒಂದು ಕೋಟಿ ರೂ.ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ದೋಚಿದ್ದಾರೆ.
ನಗರದ ದಟ್ಟಗಳ್ಳಿ 3ನೇ ಹಂತದ ಕನಕದಾಸನಗರದ ನಿವಾಸಿ ಸಾಫ್ಟ್‌ವೇರ್ ಇಂಜಿನಿಯರ್ ವಿನಯ್‌ಕುಮಾರ್ ಅವರು ಅ.20ರಂದು ಪತ್ನಿ ಮತ್ತು ಮಕ್ಕಳೊಂದಿಗೆ ಚಿಕ್ಕಮಗಳೂರಿಗೆ ಕುಟುಂಬ ಕಾರ್ಯಕ್ರಮಕ್ಕೆ ತೆರಳಿದ್ದರು. ಅ.21ರಂದು ಮಧ್ಯಾಹ್ನ 3 ಗಂಟೆಗೆ ಮನೆಗೆ ವಾಪಸ್ ಆದಾಗ ಮನೆ ಬೀಗ ಮುರಿದಿರುವುದು ಕಂಡುಬಂದಿದೆ. ಬೀರುವಿನಲ್ಲಿದ್ದ ಸುಮಾರು 700 ಗ್ರಾಂ ಚಿನ್ನದ ಆಭರಣಗಳು, ನಾಲ್ಕು ಸರಗಳು, ಮೂರು ಆಭರಣ ಸೆಟ್‌ಗಳು, ಐದು ಬಳೆಗಳು, ಎಂಟು ಕಿವಿ ಓಲೆಗಳು, 10 ಉಂಗುರಗಳು ಮತ್ತು 3 ಕೆಜಿ ಬೆಳ್ಳಿ ವಸ್ತುಗಳು ಕಳವಾಗಿವೆ ಎಂದು ವಿನಯ್‌ಕುಮಾರ್ ದೂರು ನೀಡಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.