ನವೋದಯ ಶಾಲೆಯ 4 ಶಿಕ್ಷಕರ ಮನೆಗಳಲ್ಲಿ ಕಳ್ಳತನ; 12 ದಿನಗಳಾದರೂ ಸಿಗದ ಕಳ್ಳರ ಸುಳಿವು

WhatsApp Image 2025-06-18 at 8.49.14 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಕ್ಯಾರಕೊಪ್ಪ ಗ್ರಾಮ ವ್ಯಾಪ್ತಿಯ ಜವಾಹರ ನವೋದಯ ವಿದ್ಯಾಲಯದ ಶಿಕ್ಷಕರ ವಸತಿ ಸಮುಚ್ಛಯದ 4 ಮನೆಗಳಲ್ಲಿ ಸರಣಿ ಕಳ್ಳತನ ನಡೆದು 12 ದಿನಗಳಾದರೂ ಕಳ್ಳರ ಸುಳಿವು ಸಿಕ್ಕಿಲ್ಲ.

ನವೋದಯ ವಿದ್ಯಾಲಯದ ಶಿಕ್ಷಕರಾದ ಎಂ. ಲೋಕನಾಥಂ, ಬಿ.ಎಂ. ಉಮಾದೇವಿ, ಹೇಮಲತಾ ಉನ್ನಿಕೃಷ್ಣನ್, ಸರೋಜಿನಿ ನಾಡಗೌಡ ಎಂಬುವರ ಮನೆಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಕಳ್ಳತನವಾಗಿತ್ತು. ಜೂ. 7ರಂದು ಬಕ್ರೀದ್ ಹಾಗೂ 8ರಂದು ಭಾನುವಾರ ರಜೆ ಇದ್ದಿದ್ದರಿಂದ ಶಿಕ್ಷಕರು ತಮ್ಮ ಊರುಗಳಿಗೆ ತೆರಳಿದ್ದರು. ಎಲ್ಲ ಮನೆಗಳು ಬೀಗ ಹಾಕಿರುವುದನ್ನು ಗಮನಿಸಿದ್ದ ಕಳ್ಳರು, ಮನೆಗಳ ಕೀಲಿ ಮುರಿದು ಸರಣಿಗಳ್ಳತನ ಮಾಡಿದ್ದರು. ಶಿಕ್ಷಕರು ಜೂ. 8ರಂದು ಊರುಗಳಿಂದ ಮರಳಿದಾಗ ಶಿಕ್ಷಕರಿಗೆ ಮನೆಗಳಲ್ಲಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿತ್ತು. ಈ ಕುರಿತು ಎಲ್ಲ ಶಿಕ್ಷಕರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಚಿನ್ನ, ನಗದು ಸೇರಿ ಸುಮಾರು 10.60 ಲಕ್ಷ ಮೌಲ್ಯದ ಕಳ್ಳತನವಾದ ಕುರಿತು ದೂರಿದ್ದಾರೆ.

ಶಿಕ್ಷಕರ ವಸತಿ ಸಮುಚ್ಛಯದ ಆವರಣದಲ್ಲಿರುವ ಸಿಸಿ ಕ್ಯಾಮರಾಗಳಲ್ಲಿ ಕಳ್ಳರ ಚಲನವಲನ ದಾಖಲಾಗಿದೆ. ಮೂವರು ಕಳ್ಳರು ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. 12 ದಿನಗಳಿಂದ ಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರಿಗೆ ಈವರೆಗೂ ಕಳ್ಳರ ಸುಳಿವು ದೊರೆತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net