

ಕಾಸರಗೋಡು: ಮೀಂಜ ಪಂಚಾಯಿತಿಯ ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರ ಹಾಗೂ ವರ್ಕಾಡಿ ಇಗರ್ಜಿಯ ಕಾಣಿಕೆ ಹುಂಡಿಯಿಂದ ನಗದು ಕಳವುಗೈಯಲಾಗಿದ್ದು, ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎರಡೂ ಕಡೆ ಒಂದೇ ತಂಡ ಕೃತ್ಯವೆಸಗಿರುವುದಾಗಿ ಸಂಶಯಿಸಲಾಗಿದೆ.
ಮೀಯಪದವು ಶ್ರೀ ಅಯ್ಯಪ್ಪ ಮಂದಿರದ ಹೊರಾಂಗಣದಲ್ಲಿರಿಸಲಾಗಿದ್ದ ಕಾಣಿಕೆ ಹುಂಡಿ ಬೀಗ ಒಡೆದು, ನಗದು ದೋಚಲಾಗಿದೆ. ಸೋಮವಾರ ಬೆಳಗಿನ ಜಾವ ಕಳವು ನಡೆದಿದ್ದು, 3 ಸಾವಿರ ರೂ. ಹೊಂದಿರುವ ಬಗ್ಗೆ ಮಂದಿರ ಸಮಿತಿ ಪದಾಧಿಕಾರಿಗಳು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವರ್ಕಾಡಿ ಇಗರ್ಜಿಯಲ್ಲೂ ಇದೇ ಸಮಯಕ್ಕೆ ಕಳವು ನಡೆದಿದ್ದು, ಏಸುಕ್ರಿಸ್ತ, ವೇಲಂಕಣಿ ಮಾತೆ ವಿಗ್ರಹದ ಎದುರು ಇರಿಸಲಾಗಿದ್ದ ಎರಡು ಕಾಣಿಕೆ ಹುಂಡಿಗಳಿಂದ ಹಣ ದೋಚಲಾಗಿದೆ. ಹಣ ದೋಚಿದ ನಂತರ ಕಾಣಿಕೆ ಹುಂಡಿಗಳನ್ನು ಇಗರ್ಜಿ ವಠಾರದಲ್ಲಿ ಎಸೆಯಲಾಗಿದೆ. ಇಗರ್ಜಿಯ ಇನ್ನೊಂದು ಕಾಣಿಕೆ ಹುಂಡಿಯನ್ನು ಮುರಿಯಲು ಯತ್ನಿಸಲಾಗಿತ್ತು. ಅಲ್ಲದೆ ಇಗರ್ಜಿ ಒಳಾಂಗಣಕ್ಕೆ ಪ್ರವೇಶಿಸಲು ಯತ್ನಿಸಿರುವುದಾಗಿ ಪಾಲನಾ ಸಮಿತಿ ಉಪಾಧ್ಯಕ್ಷ ರಾಜೇಶ್ ಡಿಸೋಜ ಮಂಜೇಶ್ವರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.