

ಬೆಂಗಳೂರು: ಮನೆ ಯಾರದ್ದು ಎಂಬ ವಿಷಯ ಗೊತ್ತಿದ್ದಿದ್ದರೆ ಬಹುಶಃ ಈ ಕಳ್ಳರು ಇದೊಂದು ಮನೆಯಲ್ಲಿ ಕಳವು ಮಾಡಿರುತ್ತಿರಲಿಲ್ಲ ಅನಿಸುತ್ತದೆ. ಅದಾಗ್ಯೂ ಮನೆಗೆ ನುಗ್ಗಿದ್ದ ಕಳ್ಳರು ಹಲವಾರು ವಸ್ತುಗಳನ್ನು ಕದ್ದೊಯ್ದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ದಾರೆ.
ಅಷ್ಟಕ್ಕೂ ಈ ಕಳ್ಳತನ ನಡೆದಿರುವುದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಮನೆಯಲ್ಲಿ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಸೂರ್ಯನಗರ ಫೇಸ್ 2, ಸೆಕ್ಟರ್ ಸಿ ಪ್ರದೇಶದಲ್ಲಿನ ಅನು ಫೆಲಿಸಿಟಿ ಲೇಔಟ್ನ ವಿಲ್ಲಾ ನಂ. 126ರಲ್ಲಿ ಈ ಕಳ್ಳತನ ನಡೆದಿದೆ.
ಈ ಮನೆಯು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಐಜಿಪಿ ಮತ್ತು ಡೈರೆಕ್ಟರ್ ಆಗಿರುವ ವಿಪುಲ್ ಕುಮಾರ್ ಅವರಿಗೆ ಸೇರಿದ್ದು, ಸೆಪ್ಟೆಂಬರ್ 1 ಅಥವಾ 2ರಂದು ಈ ಕಳ್ಳತನ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ವಿಪುಲ್ ಕುಮಾರ್ ಅವರ ಬಾವಮೈದುನ ಅಂಕಿತ್ ಕಿಶೋರ್ ಎಂಬವರು ಸೆ. 3ರಂದು ಮನೆ ಬಳಿಗೆ ತೆರಳಿದ್ದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದ್ದು, ಅವರು ವಿಪುಲ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ವಿಪುಲ್ ಅವರು ನೀಡಿದ್ದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.