ಉಡುಪಿಯಲ್ಲಿ ಜ್ಯುವೆಲರಿ ವರ್ಕ್​ ಶಾಪ್​ನಲ್ಲಿ ಕಳ್ಳತನ

CRIME
Published on

ನಕಲಿ ಕೀ ಬಳಸಿ ಅಂಗಡಿಗೆ ನುಗ್ಗಿದ ಕಳ್ಳರು

ವಿಜಯವಾಣಿ ಸುದ್ದಿಜಾಲ ಉಡುಪಿ

ನಗರದ ಚಿತ್ತರಂಜನ್​ ಸರ್ಕಲ್​ ಸಮೀಪದಲ್ಲಿರುವ ಜ್ಯುವೆಲರಿ ವರ್ಕ್​ಶಾಪ್​ನಲ್ಲಿ ಸೆ.8ರಂದು ತಡರಾತ್ರಿ ಕಳ್ಳತನ ನಡೆದಿದ್ದು, ಅಂದಾಜು 95 ಲಕ್ಷ ರೂ.ಗೂ ಅಧಿಕ ಮೌಲ್ಯದ ಸೊತ್ತು ದೋಚಿದ ಕಳ್ಳರು ಪರಾರಿಯಾಗಿದ್ದಾರೆ.

ಚಿನ್ನ-ಬೆಳ್ಳಿಗಳನ್ನು ರಿಫೈನ್​ ಮಾಡುವ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ನಕಲಿ ಬೀಗದ ಸಹಾಯದಿಂದ ಶೆಟರ್​ ಓಪನ್​ ಮಾಡಿದ ಕಳ್ಳರು ಒಳನುಗ್ಗಿದ್ದಾರೆ. ಡ್ರಾವರ್​ನ ಬೀಗ ಮುರಿದು ಸುಮಾರು 600 ಗ್ರಾಂ ತೂಕದ ಚಿನ್ನದ ಗಟ್ಟಿ, ಗೋಲ್ಡ್​ ಲಿಕ್ವಿಡ್​ ಕಳವು ಮಾಡಿದ್ದಾರೆ. ಈ ಹಿಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೇ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಪೊಲೀಸ್​ ಠಾಣಾ ನಿರೀಕ್ಷಕ ಮಂಜುನಾಥ ಬಡಿಗೇರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

95.71 ಲಕ್ಷ ರೂ. ಮೌಲ್ಯದ ಸೊತ್ತು ಕಳವು

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವ್​ ತಾಲೂಕಿನ ಕುಮಟೆ ಗ್ರಾಮದ ವೈಭವ್​ ಮೋಹನ ಘಾಟಗೆ (30) ಎಂಬವರ ವೈಭವ ಗೋಲ್ಡ್​-ಸಿಲ್ವರ್​ ಮೆಲ್ಟಿಂಗ್​ ರಿಫೈನರಿ ಶಾಪ್​ ಎಂಬ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ರಿಫೈನರಿ ಮಷಿನ್​ನಲ್ಲಿದ್ದ ಅಂದಾಜು 65.96 ಲಕ್ಷ ರೂ. ಬೆಲೆಯ 680 ಗ್ರಾಂ ಚಿನ್ನ, ಅಂಗಡಿಯ ಚಿನ್ನ ಇಡುವ ಡ್ರಾವರ್​ನಲ್ಲಿದ್ದ ರಿಫೈನ್​ ಮಾಡಿದ್ದ ಸುಮಾರು ಅಂದಾಜು 22 ಲಕ್ಷ ರೂ.ವಿನ 200 ಗ್ರಾಂ ಚಿನ್ನ, 6.25 ಲಕ್ಷ ರೂ. ಬೆಲೆಯ ರಿಫೈನ್​ ಮಾಡಿದ್ದ 5 ಕೆಜಿ ತೂಕದ ಬೆಳ್ಳಿಯ ಸಣ್ಣ ಸಣ್ಣ ಗಟ್ಟಿಗಳು, 1.50 ಲಕ್ಷ ರೂ. ನಗದು ಸೇರಿ ಒಟ್ಟು 95.71 ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ಅಂಗಡಿಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net