ಒಂಟಿಮಹಿಳೆಯ ಹತ್ಯೆಗೈದ ಆರೋಪಿ ಪೊಲೀಸ್ ವಶಕ್ಕೆ

23adarshkdga5
Published on

ಮಡಿಕೇರಿ: ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಒಂಟಿ ಮಹಿಳೆ ಹತ್ಯೆ ಪ್ರಕರಣ ಬೇದಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಖಾಸಗಿ ರೆಸಾರ್ಟ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಅನಿಲ್ ಬಂಧಿತ ಆರೋಪಿ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ನಿಡುಗಣೆ ಗ್ರಾಮದ ಮಹೀಂದ್ರಾ ರೆಸಾರ್ಟ್ ಸಮೀಪ ತನ್ನ ಸ್ವಂತ ಮನೆಯಲ್ಲಿ ವಾಸವಿದ್ದ ಸುಮಾರು ೭೦ ವರ್ಷದ ಒಂಟಿ ಮಹಿಳೆ ಲಲಿತಾ ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಲಾಗಿತ್ತು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ ೩೮/೨೦೨೧ ಕಲಂ: ೩೦೨,೩೯೭ ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಪ್ರಕರಣದ ಆರೋಪಿ ಪತ್ತೆಗಾಗಿ ಡಿಸಿಐಬಿ ಹಾಗೂ ಮಡಿಕೇರಿ, ಪೊಲೀಸ್ ಉಪವಿಭಾಗದ ವ್ಯಾಪ್ತಿಗೊಳಪಡುವ ಠಾಣೆಗಳಿಂದ ನುರಿತ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಣೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿಕಿರಣ್, ಡಿಸಿಐಬಿ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳ ತಂಡ ಆರೋಪಿ ಅನಿಲ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ಮೂಡಬಿದ್ರೆ ಹಾಗೂ ಮಂಗಳೂರಿನಲ್ಲಿ ಮಾರಾಟ ಮಾಡಿದ ಸುಮಾರು ೨ ಲಕ್ಷದ ೮೦ ಸಾವಿರ ಮೌಲ್ಯದ ೭೨ ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ೪೦೦೦ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಮೋಟಾರ್ ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯ ಕೆಲವೊಂದು ಕಡೆಗಳಲ್ಲಿ, ಕೆಲವೊಬ್ಬರು ಒಬ್ಬಂಟಿಗಳಾಗಿ ವಾಸವಿದ್ದು ಅಪರಿಚಿತರ ಬಗ್ಗೆ ಎಚ್ಚರದಿಂದಿರುವಂತೆ ಹಾಗೂ ಅಪರಿಚಿತರ ಚಲನವಲನದ ಬಗೆ ಸಂಶಯ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ಅಪರಾಧ ತಡೆಯಲು ಹಾಗು ಪತ್ತೆ ಹಚ್ಚಲು ಸಹಕರಿಸುವಂತೆ ಎಸ್‌ಪಿ ಕ್ಷಮಾ ಮಿಶ್ರಾ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net