

ಬಾಗೂರು: ಹೋಬಳಿಯ ಇತಿಹಾಸ ಪ್ರಸಿದ್ಧ ನಾಗರನವಿಲೆ ಶ್ರೀ ನಾಗೇಶ್ವರ ಸ್ವಾಮಿ ದೇಗುಲದಲ್ಲಿ ಹುಂಡಿ ಹಳವು ಮಾಡಲಾಗಿದೆ. ಎಂದಿನಂತೆ ಪೂಜಾ ಕಾರ್ಯ ಗಳನ್ನು ನಡೆಸಿ ಅರ್ಚಕರು ಗುರುವಾರ ಸಂಜೆ ದೇಗುಲಕ್ಕೆ ಬೀಗ ಹಾಕಿ ಮನೆಗೆ ತೆರಳಿದ್ದರು. ಶುಕ್ರವಾರ ಬೆಳಗ್ಗೆ ಪೂಜೆಗೆ ಆಗಮಿಸಿದ ಸಂದರ್ಭ ದೇಗುಲದ ಮುಖ್ಯ ಬಾಗಿಲು ಒಡೆದು ಕಳವು ಮಾಡಿದ್ದು ಬೆಳಕಿಗೆ ಬಂದಿದೆ. ಕಳ್ಳರು ಮೂರು ಹುಂಡಿಗಳನ್ನು ಅಪಹರಿಸಿ ಸಮೀಪದ ಯಾತ್ರಿ ನಿವಾಸದ ಹಿಂಭಾಗ ಗದ್ದೆಯಲ್ಲಿ ಅದನ್ನು ಒಡೆದು ನೋಟುಗಳನ್ನು ಮಾತ್ರ ತೆಗೆದುಕೊಂಡು ಉಳಿದ ಚಿಲ್ಲರೆ ಹಣ ಬಿಟ್ಟು ಪರಾರಿಯಾಗಿದ್ದಾರೆ. ಸುಮಾರು 8 ರಿಂದ 10 ಲಕ್ಷ ರೂ. ಹಣ ಕಳವು ಆಗಿರಬಹುದು ಎಂದು ಆಡಳಿತ ಅಧಿಕಾರಿ ಲತಾ ತಿಳಿಸಿದ್ದಾರೆ. ನುಗ್ಗೇಹಳ್ಳಿ ಪಿಎಸ್‌ಐ ನವೀನ್ ಕುಮಾರ್ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಶಾಸಕ ಬಾಲಕೃಷ್ಣ ಶುಕ್ರವಾರ ಸ್ಥಳಕ್ಕೆ ಧಾವಿಸಿ ಸ್ಥಿತಿಗತಿ ವಿಚಾರಿಸಿದ್ದಾರೆ.