ತೀರ್ಥಹಳ್ಳಿ: ಮಾ.12ರಿಂದ ಮಾರಿಕಾಂಬಾ ದೇವಿ ಜಾತ್ರೆ

333
Published on

ತೀರ್ಥಹಳ್ಳಿ: ಎರಡು ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ಶ್ರೀ ಮಾರಿಕಾಂಬಾ ಜಾತ್ರೆ ಮಾ.12ರಿಂದ 20ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ ತಿಳಿಸಿದರು.

ಮಾ.12ರಂದು ಮಾರಿ ಸಾರುವ ಮೂಲಕ ಜಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. 19ರಂದು ಎಣ್ಣೆ ಭಂಡಾರ ಪೂಜೆಯೊಂದಿಗೆ ದೇವಿಯ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು. 20ರ ಮಧ್ಯಾಹ್ನ 3ರಿಂದ ರಾಜಬೀದಿ ಉತ್ಸವ ನಡೆಯಲಿದ್ದು ಕೊನೆಯಲ್ಲಿ ಮೂರ್ತಿಯನ್ನು ತುಂಗಾ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಪ್ರತಿದಿನ ಧಾರ್ಮಿಕ ಕಾರ್ಯಕ್ರಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.13ರಿಂದ ಪ್ರತಿದಿನ ಸಂಜೆ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಡ್ಯಾನ್ಸ್ ಪ್ಯಾಲೇಸ್ ತಂಡದಿಂದ ನೃತ್ಯ ಸಂಭ್ರಮ, ವಿಠಲ ನಾಯಕ್ ಕಲ್ಲಡ್ಕ ತಂಡದಿಂದ ಗೀತಾ ಸಾಹಿತ್ಯ ಸಂಭ್ರಮ, ಪ್ರೊ. ಕೃಷ್ಣೇಗೌಡ ಅವರಿಂದ ನಗೆ ವೈವಿಧ್ಯ, ಮಂಗಳೂರಿನ ಸುಪ್ರೀತ್ ಸಫಲಿಗ ಬಳಗದ ಸಂಗೀತ ಸೌರಭ, ಜನಪದ ಗಾಯಕಿ ಸವಿತಾ ಗಣೇಶ್ ತಂಡದಿಂದ ಸವಿತಕ್ಕನ ಅಳ್ಳಿ ಬ್ಯಾಂಡ್‌ನಿಂದ ಸಂಗೀತ ರಸಸಂಜೆ, ಬೆಂಗಳೂರಿನಲ್ಲಿ ನೆಲೆಸಿರುವ ಸ್ಥಳೀಯರಿಂದ ನೃತ್ಯ ವೈಭವ ಜರುಗಲಿದೆ. 18ರಂದು ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಯಕ್ಷಗಾನ ಮೇಳದವರಿಂದ ಅಯೋಧ್ಯಾ ದೀಪ ಯಕ್ಷಗಾನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಜಾತ್ರೆ ಅಂಗವಾಗಿ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ 15ರಿಂದ 17ರವರೆಗೆ ಹೊನಲು ಬೆಳಕಿನ ರಾಷ್ಟ್ರಮಟ್ಟದ ಖೋ ಕೋ ಪಂದ್ಯಾವಳಿ ಆಯೋಜಿಸಲಾಗಿದೆ. 8 ಪುರುಷ ಹಾಗು 6 ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ ಎಂದು ವಿವರಿಸಿದರು.
ಧರ್ಮದರ್ಶಿ ಮಂಡಳಿ ಖಜಾಂಚಿ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ಧನಂಜಯ್, ಸಹ ಕಾರ್ಯದರ್ಶಿ ಪ್ರಭಾಕರ್, ಮೊಕ್ತೇಸರ ಟಿ.ಕೆ.ಜಯರಾಮ ಶೆಟ್ಟಿ, ಸಂದೇಶ್ ಜವಳಿ, ರಾಘವೇಂದ್ರ ನಾಯಕ್, ಕೆ.ಸಿ.ಚಂದ್ರಶೇಖರ್, ಚಿದಾನಂದ್, ಜಯಪ್ರಕಾಶ್ ಶೆಟ್ಟಿ, ಬಿ.ಆರ್.ರಾಘವೇಂದ್ರ ಶೆಟ್ಟಿ, ಟಿ.ಎನ್.ಅನಿಲ್, ಬಿ.ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net