

ತೀರ್ಥಹಳ್ಳಿ: ಲಾಕ್ಡೌನ್ ಪರಿಣಾಮ ಅಡಿಗಡಿಗೂ ಎದುರಾದ ಚೆಕ್ಪೋಸ್ಟ್ಗಳನ್ನು ದಾಟಿ ವಧು ಮದುವೆ ಮಂಟಪ ತಲುಪುವಷ್ಟರಲ್ಲಿ ಮುಹೂರ್ತ ಮೀರಿಹೋಗಿ ಪುರೋಹಿತರು ಮನೆ ಸೇರಿದ್ದರು. ಆದರೂ ವಿಚಲಿತರಾಗದ ಕುಟುಂಬದವರು ವರನ ಮನೆಯಲ್ಲೇ ವಧುವಿಗೆ ತಾಳಿ ಕಟ್ಟಿಸಿ ನಿಟ್ಟುಸಿರು ಬಿಟ್ಟರು!
ಇಂಥದ್ದೊಂದು ಅಪರೂಪದ ವಿವಾಹ ಭಾನುವಾರ ನಡೆದಿದ್ದು ತೀರ್ಥಹಳ್ಳಿ ಸಮೀಪದ ಶಿವರಾಜಪುರದಲ್ಲಿ. ಈ ಮದುವೆಗೆ ಸಾಕ್ಷಿಯಾದವರು ಹಾಸನದ ವಧುವಿನ ತಂದೆ-ತಾಯಿ ಮತ್ತು ವರನ ಮನೆಯವರು ಮಾತ್ರ.
ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತೋಷ್ ಮತ್ತು ಐಶ್ವರ್ಯಾ ಸಹೋದ್ಯೋಗಿಗಳು. ಪರಸ್ಪರ ಪ್ರೀತಿಸುತ್ತಿದ್ದ ಮದುವೆಗೆ ಮನೆಯವರನ್ನು ಒಪ್ಪಿಸಿದ್ದರು. ಭಾನುವಾರ ಬೆಳಗ್ಗೆ 8.45ಕ್ಕೆ ಶಿವರಾಜಪುರ ಸಾಲುಮರದ ಮಹಾಗಣಪತಿ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಐಶ್ವರ್ಯಾಳ ತಂದೆ-ತಾಯಿ ಹಾಸನದಿಂದಲೇ ಮಗಳನ್ನು ಸಿಂಗರಿಸಿಕೊಂಡು ಬೇಗ ಹೊರಟು ಬಂದಿದ್ದರು. ಲಾಕ್ಡೌನ್ ಇದ್ದ ಕಾರಣ ಚೆಕ್ಪೋಸ್ಟ್ ದಾಟಿ ಬರುವಷ್ಟರಲ್ಲಿ 9 ಗಂಟೆ ದಾಟಿ ಮುಹೂರ್ತ ಮೀರಿತ್ತು. ಮದುವಣಿಗರನ್ನು ದೇವಸ್ಥಾನದಲ್ಲಿ ಕಾಯುತ್ತಿದ್ದ ಪುರೋಹಿತರು ಕೂಡ ಮನೆಗೆ ಹಿಂದಿರುಗಿದ್ದರು. ಇದರಿಂದ ವಿಚಲಿತರಾಗದ ಎರಡೂ ಕುಟುಂಬದವರು ಮುಹೂರ್ತ ಸೇರಿ ಯಾವ ವಿಧಿಗಳ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಯಾವ ಆಡಂಬರವೂ ಇಲ್ಲದಂತೆ ವರನ ಮನೆಯಲ್ಲೇ ಸರಳವಾಗಿ ವಿವಾಹ ನೆರವೇರಿಸಿದರು.
ತಂದೆ-ತಾಯಿಗೆ ಕ್ವಾರಂಟೈನ್ ಬಿಸಿ
ಮಗಳನ್ನು ಮದುವೆ ಮಾಡಿಕೊಟ್ಟು ಊರಿಗೆ ಹಿಂತಿರುಗಲು ಬಯಸಿದ್ದ ಐಶ್ವರ್ಯಾಳ ಪಾಲಕರಿಗೆ ತೀರ್ಥಹಳ್ಳಿ ತಾಲೂಕು ಆಡಳಿತ ಅನುಮತಿ ನಿರಾಕರಿಸಿದ ಕಾರಣ ಬೀಗರ ಮನೆಯಲ್ಲೇ ಹೋಮ್ ಕ್ವಾರಂಟೈನ್ಗೆ ದಾಖಲಾಗಬೇಕಾದ ಅನಿವಾರ್ಯತೆ ಎದುರಾಗಿದೆ.