ಮಾನವೀಯ ಮೌಲ್ಯ ಕಲಿಸುವ ರಂಗಭೂಮಿ: ಡಾ.ಸುಜಾತಾ ಅಕ್ಕಿ

18
Published on

ಮೈಸೂರು: ರಂಗಭೂಮಿ ನಾವೆಲ್ಲರೂ ಸಮಾನರು ಎಂಬ ಮಾನವೀಯ ಮೌಲ್ಯವನ್ನು ಕಲಿಸುತ್ತದೆ ಎಂದು ನಾಟಕ ರಚನೆಕಾರರಾದ ಡಾ.ಸುಜಾತಾ ಅಕ್ಕಿ ಅಭಿಪ್ರಾಯಪಟ್ಟರು.

ಸಂಚಲನ ಮೈಸೂರು ರಂಗತಂಡದಿಂದ ನಗರದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಚಲನ ದಶಮಾನೋತ್ಸವ ಉದ್ಘಾಟನೆ ಹಾಗೂ ಹರಕೆಯ ಕುರಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾನ ಮನಸ್ಸು, ಮಾನವೀಯ ಮೌಲ್ಯದ ಜತೆಗೆ ರಂಗಭೂಮಿ ಯುವ ಜನಾಂಗದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಇದು ಸನ್ಮಾರ್ಗದಲ್ಲಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ ಎಂದು ಹೇಳಿದರು.

ಇಂದಿನ ಜಾಗತೀಕರಣದ ಧಾವಂತಕ್ಕೆ ಸಿಲುಕಿ ಬಳಲುವವರಿಗೆ ಕಲೆ, ಸಾಹಿತ್ಯ ಮತ್ತು ಸಂಗೀತದಿಂದ ಮನೋಲ್ಲಾಸವೂ ದೊರಯಲಿದೆ. ಮನುಷ್ಯ ತಾನು ಮಾಡಿದ ಕೆಲಸ ಕಾರ್ಯಗಳ ಫಲವನ್ನು ತಾನೇ ಅನುಭವಿಸುತ್ತಾನೆ. ಒಳಿತು ಮಾಡಿದರೆ ಉತ್ತಮ ಫಲವನ್ನು, ಕೆಡುಕು ಮಾಡಿದರೆ ಕೆಟ್ಟದನ್ನು ಅನುಭವಿಸಿಯೇ ತೀರುತ್ತಾನೆ ಎಂದರು.

ನಟ ಆಸೀಫ್ ಕ್ಷತ್ರಿಯ, ಸಂಚಲನ ಮೈಸೂರು ರಂಗತಂಡದ ಅಧ್ಯಕ್ಷ ದೀಪಕ್ ಮೈಸೂರು, ನಿರ್ದೇಶಕರಾದ ಎಸ್.ಶೀಲಾ, ರಂಗ ನಿರ್ದೇಶಕಿ ಶ್ವೇತಾ ಶ್ರೀನಿವಾಸ್, ಕಲಾ ಪ್ರೋತ್ಸಾಹಕ ಹರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net