

ಮೈಸೂರು: ರಂಗಭೂಮಿ ಮನುಷ್ಯ-ಮನುಷ್ಯರ ನಡುವೆ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಕಾವಾ ಆಡಳಿತಾಧಿಕಾರಿ ನಿರ್ಮಲಾ ಮಠಪತಿ ಅಭಿಪ್ರಾಯಪಟ್ಟರು.
ತರಂಗಂ ಟ್ರಸ್ಟ್ ತಲಕಾಡು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದಲ್ಲಿ ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ತರಂಗಂ ನಾಟಕೋತ್ಸವ 2025ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂಕಗಳ ಆಧಾರದಲ್ಲಿ ಜೀವನ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ರಂಗಭೂಮಿ ಏನನ್ನು ನೀಡಿದೆ ಎಂಬುವವರಿಗೆ ಈ ವೇದಿಕೆ ಉತ್ತರವಾಗಿದೆ ಎಂದರು.
ಎಲ್ಲರನ್ನು ಒಂದೆಡೆಗೆ ಸೇರಿಸುವ, ತೆರೆಮರೆಯ ಕಲೆಗಳಿಗೆ ಉತ್ತಮ ವೇದಿಕೆ ಒದಗಿಸಿ ಅವರ ಭವಿಷ್ಯ ರೂಪಿಸುವಲ್ಲಿ ರಂಗಭೂಮಿ ಪಾತ್ರ ಬಹಳ ದೊಡ್ಡದಿದೆ. ಹೀಗಾಗಿ ರಂಗಭೂಮಿ ಮನುಷ್ಯ-ಮನುಷ್ಯರ ನಡುವೆ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದರು.
ತರಂಗಂ ಇಂದು ತೆರೆಮರೆಲ್ಲಿ ಕೆಲಸ ಮಾಡುವ ಪ್ರತಿಭೆಗಳನ್ನು ಮುಖ್ಯ ವೇದಿಕೆಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಇದು ರಂಗಭೂಮಿಯ ಮಾಧ್ಯಮವಾಗಿ ಮಾಡುತ್ತಿರುವ ಕೆಲಸ ಹೀಗೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.
ದೃಶ್ಯಕಲಾ ವಿನ್ಯಾಸಕ ಉಲ್ಲಾಸ್ ದೇವನೂರು ಮಾತನಾಡಿ, ಪ್ರಸಕ್ತ ನಡೆಯುತ್ತಿರುವ ವಿದ್ಯಮಾನಗಳನ್ನು, ತಪ್ಪುಗಳನ್ನು ಕೇಳುವ, ಸಮಾಜವನ್ನ ಬಡಿದೆಬ್ಬಿಸುವ ಕೆಲಸವನ್ನು ಮಾಡಬೇಕು. ಈ ಸಮಾಜ ಸೇವೆ ರಾಜ್ಯದ ಉದ್ದಗಲಕ್ಕೂ ತರಂಗಂ ವಿಸ್ತರಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಮಾತನಾಡಿ, ತರಂಗಂ ಇದೇ ರೀತಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಪ್ರತಿಭೆಗಳನ್ನು ಹುಟ್ಟುಹಾಕುವ ಕೆಲಸ ಮಾಡಬೇಕು ಎಂದು ಹೇಳಿದರು.
ಗುಬ್ಬಿ ವೀರಣ್ಣ ಪೀಠದ ರಂಗ ತಜ್ಞ ಅರಸೀಕೆರೆ ಯೋಗಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ.ಡಿ.ಸುದರ್ಶನ್, ತರಂಗಂ ಟ್ರಸ್ಟ್ ಸಂಸ್ಥಾಪಕ ಗುರು ತಲಕಾಡು ಇದ್ದರು.
ಕಾರ್ಯಕ್ರಮದಲ್ಲಿ ವಸ್ತ್ರ ವಿನ್ಯಾಸಕ ಮಹೇಶ್ ಹೆಬ್ಬಾಳು, ರಂಗಪ್ರಚಾರ ವಿನ್ಯಾಸಕ ವಿ.ರವಿ, ಯುವ ನಿರ್ದೇಶಕ ಪ್ರದೀಪ್ ಹಾಸನ ಅವರನ್ನು ಸನ್ಮಾನಿಸಲಾಯಿತು.
ಹಾಸನ ವಿಶ್ವಪಥ ಚಾರಿಟಬಲ್ ಟ್ರಸ್ಟ್ ತಂಡದಿಂದ ಪ್ರದೀಪ್ ಹಾಸನ ಅವರ ನಿರ್ದೇಶನದಲ್ಲಿ ಪಿ.ಲಂಕೇಶ್ ರಚನೆಯ ಪೊಲೀಸರಿದ್ದಾರೆ ಎಚ್ಚರಿಕೆ ನಾಟಕ ಪ್ರದರ್ಶನಗೊಂಡಿತು.