

ಮೈಸೂರು: ರಂಗಕಲೆ ಸಾಮಾಜಿಕ ವೈರುಧ್ಯಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಜನ ಸಾಮಾನ್ಯರ ಮಾಧ್ಯಮ ಎಂದು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗದ ಸಂಸ್ಥಾಪಕ ಕಲ್ಮಳ್ಳಿ ನಟರಾಜು ಅಭಿಪ್ರಾಯಪಟ್ಟರು.
ಅಗ್ರಹಾರದ ಶಿವ ಸನ್ನಿಧಿ ಕಚೇರಿಯಲ್ಲಿ ಶನಿವಾರ ಕಲಾ ಬಳಗದ ಪದಾಧಿಕಾರಿಗಳು, ಪ್ರಭುಲಿಂಗಲೀಲೆ ನಾಟಕ ಕಲಾವಿದರು, ರಂಗ ನಿರ್ದೇಶಕರು ಹಾಗೂ ಕಲಾ ಪೋಷಕರಿಗೆ ಆಯೋಜಿಸಿದ್ದ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110 ನೇ ಜಯಂತಿ ಮಹೋತ್ಸವ ನಿಮಿತ್ತ ಮೈಸೂರಿನ ಸುತ್ತೂರು ಮಠದಲ್ಲಿ ಪ್ರದರ್ಶನಗೊಂಡ ಪ್ರಭುಲಿಂಗಲೀಲೆ ನಾಟಕ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಹಾಗಾಗಿ ರಂಗಕಲೆ ಈ ನೆಲದ ಅಸ್ಮಿತೆ ಮತ್ತು ಜಾನಪದ ಕಲೆಗಳಿಗೆ ಪಿತೃ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.‘ಕಾವೇಷು ನಾಟಕಂ ರಮ್ಯಂ’ ಎಂಬ ಕಾಳಿದಾಸನ ನುಡಿಯನ್ನು ಈ ನಾಟಕ ಸಾಬೀತು ಮಾಡಿದೆ. ಶೇಕ್ಸ್‌ಪಿಯರ್‌ನ ನಾಟಕಗಳಿಗಿಂತಲೂ ಕಾಳಿದಾಸನ ‘ಅಭಿಜ್ಞಾನ ಶಾಕುಂತಲಾ’ ನಾಟಕ ಪರಿಣಾಮಕಾರಿಯಾಗಿದೆ ಎಂದರು.
ರಾಜೇಂದ್ರ ಶ್ರೀಗಳು ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಆಧ್ಯಾತ್ಮಿಕ ವಿಚಾರಧಾರೆಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹಾಗಾಗಿ ಆ ಕೊಡುಗೆಗಳು ಅವರನ್ನು ಬಸವಣ್ಣ ಮತ್ತು ಸಮಕಾಲೀನ ಶರಣರಂತೆ ಜೀವಂತವಾಗಿರಿಸಿವೆ. ಶರಣ ಚಿಂತನೆಗಳ ಪ್ರಚಾರಕ್ಕಾಗಿ ರಾಜೇಂದ್ರ ಶ್ರೀಗಳು ಸ್ಥಾಪಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಪಂಚದಾದ್ಯಂತ ಶರಣ ಧರ್ಮವನ್ನು ಸಾರುತ್ತಿದೆ ಎಂದ ಅವರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೂಡ ಎಲ್ಲ ಕ್ಷೇತ್ರದಲ್ಲೂ ಕೊಡುಗೆ ನೀಡುತ್ತಿದ್ದಾರೆ ಎಂದರು.
ಕಲಾ ಬಳಗದ ರಂಗ ನಿರ್ದೇಶಕ ಬೀರಿಹುಂಡಿ ಗೋವಿಂದರಾಜು, ಪದಾಧಿಕಾರಿಗಳಾದ ಹೊಸಕೋಟೆ ದೇವಣ್ಣ, ಮಾಲಂಗಿ ಸುರೇಶ್, ಬಿ.ಎಂ.ಪರಮೇಶ್, ಸುರೇಶ್, ಗಣೇಶ್, ಬಾಗ್ಲಿ ಮಹೇಶ್, ಅನಿಲ್ ಕುಮಾರ್, ಹಿರಿಯ ರಂಗಭೂಮಿ ಕಲಾವಿದರಾದ ಹುಲ್ಲಹಳ್ಳಿ ಪಾರ್ವತಪ್ಪ, ಸೋಮಶೇಖರಪ್ಪ, ಶಿವಕುಮಾರ್, ಕೊತ್ತಲವಾಡಿ ಸಿದ್ಧರಾಮೇಶ್, ಪ್ರಸನ್ನ, ಗೌಡಗೆರೆ ಮಹೇಶ, ಪುಟ್ಟಣ್ಣ ಚಿಕ್ಕಳ್ಳಿ, ಕೆರೆಹಳ್ಳಿ ದೊರೆಸ್ವಾಮಿ, ಪ್ರತಿಧ್ವನಿ ಪ್ರಸಾದ್, ನಂ.ಸಿದ್ದಪ್ಪ, ಸುರೇಶ್ ಇದ್ದರು.