

ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಭೂಮಿ ಜೀವನದ ಪ್ರತಿಬಿಂಬ. ಅದು ಸದಾಕಾಲ ಜೀವಂತ ಕಲೆಯಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿಯೇ ಪ್ರಬಲ ಮಾಧ್ಯಮ ಎಂದು ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶರಣ ಲಿಂ. ಗುರುಪಾದಪ್ಪ ದುಂಡಪ್ಪ ದೊಡವಾಡ ದತ್ತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ರಂಗಭೂಮಿ ಪಾತ್ರ ಕುರಿತು ಅವರು ಮಾತನಾಡಿದರು.
ಜೀವನದಲ್ಲಿ ವ್ಯಕ್ತಿ ಮುಖ್ಯವಲ್ಲ. ಅವರ ವ್ಯಕ್ತಿತ್ವ ಮುಖ್ಯ. ವೇಷ, ಭೂಷಣಗಳಿಂದ ವ್ಯಕ್ತಿಯನ್ನು ಅಳೆಯಬಾರದು. ಅವರ ಹೃದಯವಂತಿಕೆ ಗುಣಗಳಿಂದ ವ್ಯಕ್ತಿತ್ವ ಅಳೆಯಬೇಕು. ರಂಗಭೂಮಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ 52 ಪ್ರಧಾನ ಅಂಶಗಳಿವೆ. ಸಂವಹನಶೀಲತೆ, ಆತ್ಮವಿಶ್ವಾಸ, ನಾಯಕತ್ವದ ಗುಣ, ಸಕಾರಾತ್ಮಕ ಚಿಂತನೆ, ಸಮಯೋಚಿತ ಮಾತುಗಾರಿಕೆ, ಸೃಜನಶೀಲ ಗುಣಗಳನ್ನು ಕಲಿಸುವ ಮಾಧ್ಯಮವೇ ರಂಗಭೂಮಿ ಎಂದರು.
ಸೋಲಿನಲ್ಲೂ ನಾನು ಗೆಲ್ಲಬಲ್ಲೆ ಎಂಬ ದೃಢ ಸಂಕಲ್ಪ ಶಕ್ತಿಯನ್ನು ರಂಗಭೂಮಿ ಕಲಿಸುತ್ತದೆ. ಸೌಂದರ್ಯ ಪ್ರಜ್ಞೆ, ಭಾಷಾ ಕೌಶಲ, ಜೀವನ ಪಾಠವನ್ನು ಕಲಿಸುವ ಸಾಮರ್ಥ್ಯ ರಂಗಭೂಮಿಗೆ ಇದೆ. ವ್ಯಕ್ತಿತ್ವ ವಿಕಸನಕ್ಕೆ ಕೌಟುಂಬಿಕೆ ಹಿನ್ನೆಲೆ, ಪರಿಸರದ ಪ್ರಭಾವ ಹಾಗೂ ಸಂಸ್ಕಾರಗಳೂ ಪ್ರಭಾವ ಬೀರುತ್ತವೆ. ಆದರೆ ಅಂತಹ ಮೌಲ್ಯಾಧಾರಿತ ವ್ಯಕ್ತಿತ್ವ ರೂಪಿಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿರಬೇಕು ಎಂದರು.
ಸರಸಾನಂದ ದೊಡವಾಡ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಪರ ಕರಣ ದೊಡವಾಡ ಮಾತನಾಡಿದರು. ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಸಿ.ಎಸ್. ಪಾಟೀಲ, ಸಿ.ಯು. ಬೆಳ್ಳಕ್ಕಿ, ಶಶಿ ದೊಡವಾಡ, ಗಂಗಮ್ಮ ದೊಡವಾಡ, ರಾಜೇಶ್ವರಿ ಹತ್ತಿಕಾಳ, ಬಿ.ಎಸ್. ತಾಳಿಕೋಟಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು.