

ನೆಲಮಂಗಲ: ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸತಿಕ ಕಾರ್ಯಕ್ರಮದಲ್ಲಿ ರಂಗಶಿಕ್ಷಣ ಕೇಂದ್ರದಿಂದ ನಾಟಕ ಪ್ರದರ್ಶನಕ್ಕೆ ಅವಕಾಶ ದೊರೆತಿದೆ ಎಂದು ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ದರಾಜು ತಿಳಿಸಿದರು. ನಗರದ ಸದಾಶಿವನಗರದ ರಂಗಶಿಕ್ಷಣ ಕೇಂದ್ರ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 4 ದಶಕಗಳಿಂದ ತಾಲೂಕಿನಲ್ಲಿ ರಂಗಶಿಕ್ಷಣ ಕೇಂದ್ರ ಕರ್ತವ್ಯ ನಿರ್ವಹಿಸುತ್ತಿದೆ. ಗ್ರಾಮಾಂತರ ಜಿಲ್ಲೆಗೆ ಇದೇ ಮೊದಲ ಬಾರಿಗೆ ಮೈಸೂರು ದಸರಾ ಸಾಂಸತಿಕ ಕಾರ್ಯಕ್ರಮದಲ್ಲಿ ತಾಲೂಕಿನ ರಂಗ ಶಿಕ್ಷಣ ಕೇಂದ್ರದಿಂದ ನಾಟಕ ಪ್ರದರ್ಶನಕ್ಕೆ ಅವಕಾಶ ದೊರಕಿದೆ. ಕಲೆ ನಂಬಿದವರಿಗೆ ಎಂದಿಗೂ ಮೋಸವಾಗಿಲ್ಲ. ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ ಕಲೆ ನಮ್ಮ ಕೈ ಹಿಡಿಯುತ್ತದೆ ಎಂದರು.
ನಾಟಕ ಪ್ರದರ್ಶನ: ಸೆ.22ರಂದು ಸಂಜೆ 6 ಗಂಟೆ ಮೈಸೂರು ಅರಮನೆ ಮೈದಾನದಲ್ಲಿ ರಂಗಶಿಕ್ಷಣ ಕೇಂದ್ರದಿಂದ ವಿ.ದೇವರಾಜು ನಿರ್ದೇಶನದ ಅನುಜರ ಕಲಹ ಎಂಬ ಪೌರಾಣಿಕ ನಾಟಕವನ್ನು 20ಕ್ಕೂ ಹೆಚ್ಚು ಮಂದಿ ರಂಗಶಿಕ್ಷಣ ಕೇಂದ್ರದ ಕಲಾವಿದರು ಅಭಿನಯಿಸಲಿದ್ದಾರೆ ಎಂದು ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಸಿ.ಸಿದ್ದರಾಜು ತಿಳಿಸಿದರು. ರಂಗಶಿಕ್ಷಣ ಕೇಂದ್ರ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು ಮಾತನಾಡಿ, ರಂಗಶಿಕ್ಷಣ ಕೇಂದ್ರವು ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿ ವಿವಿಧ ರಾಜ್ಯದಲ್ಲಿ ನಾಟಕ ಪ್ರದರ್ಶನ ಮಾಡಿದೆ. ಆದರೆ ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ದೊರಕಿರುವುದು ಸಂತಸ ತಂದಿದೆ ಎಂದರು. ದಶರಥ, ಕೀರ್ತನ್, ಕಿರಣ್, ಸಾಗರ್, ಭವ್ಯಾ ಇತರರು ಇದ್ದರು.