

ದೇವದುರ್ಗ: ನಶಿಸಿ ಹೋಗುತ್ತಿರುವ ಜನಪದ ಕಲೆಯನ್ನು ಉಳಿಸಿ ಬೆಳೆಸುವುದು ಮುಖ್ಯವಾಗಿದೆ. ಯುವ ಸಮೂಹ ಮೊಬೈಲ್ ಮೊರೆ ಹೋಗದೆ, ಜನಪದ ಕಲೆ, ಸಾಹಿತ್ಯ, ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಬೇಕು ಎಂದು ಜನಪದ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ ಯಾಟಗಲ್ ಹೇಳಿದರು.
ಪಟ್ಟಣದ ಮುರಿಗೆಪ್ಪ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಜನಪದ ಪರಿಷತ್ತಿನಿಂದ ಆಯೋಜಿಸಿದ್ದ ಬೆಪ್ಪು ತಕ್ಕಡೆ ಬೋಳೆ ಶಂಕರ ಹಾಗೂ ಕೃಷ್ಣಗೌಡನ ಆನೆ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಕಲೆ ಸಿನಿಮಾಕ್ಕೆ ಸೀಮಿತವಾಗಿಲ್ಲ. ಎಲ್ಲ ವಿಭಾಗದಲ್ಲಿ ಆಯಾಮ ಚಾಚಿಕೊಂಡಿದೆ. ನಾಟಕಗಳು ಯಾವುದೇ ಸಿನಿಮಾಗಿಂತಲೂ ಕಡಿಮೆ ಅಲ್ಲ. ಆದರೆ, ರಂಗಭೂಮಿ ಕಲಾವಿದರ ನೋವು ಯಾರಿಗೂ ಅರ್ಥವಾಗುತ್ತಿಲ್ಲ ಎಂದರು.
ಗ್ರಾಮೀಣ ಭಾಗದಲ್ಲಿ ಜನಪದ ಸೊಗಡು ಹೆಚ್ಚಾಗಿ ಹರಡಿಕೊಂಡಿದ್ದು, ಹಳ್ಳಿ ಜನರಿಂದ ಜನಪದ ಜೀವಂತವಾಗಿದೆ. ಗ್ರಾಮೀಣ ಭಾಗದ ಜನರು ನಾಟಕಗಳನ್ನು ನೋಡುವ ಮೂಲಕ ರಂಗಭೂಮಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಅನೇಕ ಜನಪದ, ರಂಗಭೂಮಿ ಕಲಾವಿದರಿದ್ದು ಪ್ರೋತ್ಸಾಹ ಸಿಗಬೇಕಿದೆ. ಸರ್ಕಾರ ರಂಗಭೂಮಿ ಕಲಾವಿದರಿಗೆ ವಿಶೇಷ ಯೋಜನೆ ರೂಪಿಸಿ ಜನಪದ ಉಳಿಸಲು ಮುಂದಾಗಬೇಕು ಎಂದು ಬಸವರಾಜ ಯಾಟಗಲ್ ಹೇಳಿದರು. ಪ್ರಮುಖರಾದ ರಾಜಶೇಖರ ಗೂಗಲ್, ಪ್ರಕಾಶ ಬುದ್ದಿನ್ನಿ, ಯಲ್ಲಪ್ಪ ಅಂದ್ರಾಳ ಇದ್ದರು.