

ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಭೂಮಿ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ನಿತ್ಯ ನಡೆಯುವ ಘಟನೆಗಳನ್ನು ನಾಟಕದ ಮೂಲಕ ಪ್ರಚರಪಡಿಸುವುದು ರಂಗಭೂಮಿ ಕೆಲಸ. ಸಾಮಾಜಿಕವಾಗಿ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಬಲ್ಲ ಸಾಮರ್ಥ್ಯ ರಂಗಭೂಮಿಗೆ ಇದೆ ಎಂದು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ ನಿಮಿತ್ತ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ, ಉಪನ್ಯಾಸ, ರಂಗ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಏಣಗಿ ಬಾಳಪ್ಪನವರ ಕೊಡುಗೆ ರಂಗಭೂಮಿಗೆ ಅಪಾರ. ಅದೇ ರೀತಿ ಚಿತ್ತರಗಿಯ ಗಂಗಾಧರ ಶಾಸ್ತ್ರಿಗಳ ಕೊಡುಗೆ ಮರೆಯುವಂತಿಲ್ಲ. ನಾಟಕಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಅನೇಕ ರಂಗ ತಂಡಗಳು ಕಾರ್ಯ ನಿರ್ವಹಿಸುತ್ತ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ಲಕ್ಷ್ಮೇಶ್ವರದ ಸ್ತ್ರೀ ಸಂಗೀತ ನಾಟಕ ಮಂಡಳಿ ಪರ ಶಾರದಮ್ಮ ಹೊಂಬಳ ಹಾಗೂ ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟ್ಯ ಸಂದ ಪರ ವಿಜಯಲಕ್ಷ್ಮೀ ಹಿರೇಮಠ ರಂಗ ಗೌರವ ಸ್ವೀಕರಿಸಿದರು. ಮಹ್ಮದಲಿ ಹೊಸೂರ ಹಾಗೂ ಗಣೇಶ ಅಮೀನಗಡ ಮಾತನಾಡಿದರು.
ಡಾ. ಬಸವರಾಜ ಏಣಗಿ ದತ್ತಿ ಆಶಯ ಕುರಿತು ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸತೀಶ ತುರಮರಿ, ಗುರು ಹಿರೇಮಠ, ಶಿವಾನಂದ ಭಾವಿಕಟ್ಟಿ, ಡಾ. ಸುಭಾಸ ಏಣಗಿ, ಅರವಿಂದ ಏಣಗಿ, ಅಶೋಕ ಏಣಗಿ, ಡಾ. ಬಸವರಾಜ ಜಗಜಂಪಿ, ಡಾ. ರಾಮಕೃಷ್ಣ ಮರಾಠೆ, ಡಾ. ಪಿ.ಜಿ. ಕೆಂಪಣ್ಣವರ, ಡಾ. ಶಶಿಧರ ನರೇಂದ್ರ, ಡಾ. ಪ್ರಕಾಶ ಗರುಡ, ಎಂ.ಎಂ. ಚಿಕ್ಕಮಠ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.