

ಸಾಗರ: ರಂಗಭೂಮಿ ಕೇವಲ ನಟನೆ, ಮನೋರಂಜನೆಗೆ ಸೀಮಿತವಲ್ಲ. ನಮ್ಮೊಳಗಿನ ಸಾಕಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿ ಕೊಡುತ್ತದೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.
ಇಲ್ಲಿನ ಶಿವಪ್ಪನಾಯಕ ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸ್ಪಂದನ ಸಂಸ್ಥೆ ಹಮ್ಮಿಕೊಂಡಿದ್ದ ಮಕ್ಕಳ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ ಮೂಲಕ ನಡೆಸುವ ಪ್ರತಿಯೊಂದು ಚಟುವಟಿಕೆಯೂ ಅರ್ಥಪೂರ್ಣವಾಗಿರುತ್ತದೆ. ಸದಾ ಹುಡುಕಾಟದ ಮನಸ್ಥಿತಿಯನ್ನು ಬೆಳೆಸುವ ಶಕ್ತಿ ರಂಗಭೂಮಿಗಿದೆ. ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಪ್ರತಿಭೆ ಸುಪ್ತವಾಗಿರುತ್ತದೆ. ಹುಡುಕಿ ಸೂಕ್ತ ಮಾರ್ಗದರ್ಶನ ನೀಡಿದರೆ ಅವರು ಉತ್ತಮ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯ. ಮಕ್ಕಳ ರಂಗಭೂಮಿಯಲ್ಲಿ ಸಾಕಷ್ಟು ಕೆಲಸವಾಗಬೇಕಾಗಿದೆ. ಮಕ್ಕಳ ಆಲೋಚನಾ ಕ್ರಮಕ್ಕೆ ತಕ್ಕಂತೆ ನಾಟಕಗಳು ತಯಾರಾಗಬೇಕಾಗಿದೆ ಎಂದರು.
ಸ್ಪಂದನ ಸಂಸ್ಥೆ ಮುಖ್ಯಸ್ಥೆ ಎಂ.ವಿ.ಪ್ರತಿಭಾ ಮಾತನಾಡಿ, ಮಕ್ಕಳ ಬೆಳವಣಿಗೆಗೆ ರಂಗಭೂಮಿ ಪೂರಕ. ನಲಿ-ಕಲಿ ರಂಗಭೂಮಿ ಅಂಶಗಳನ್ನು ಒಳಗೊಂಡು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೂ ಪೂರಕವಾಗಿದೆ. ಪಠ್ಯದಲ್ಲಿ ರಂಗಭೂಮಿ ಅಳವಡಿಸುವತ್ತ ಗಮನ ಹರಿಸಬೇಕು. ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡುವ ಮೂಲಕ ಪರಸ್ಪರ ಮುಖಾಮುಖಿ ಆಗುತ್ತೇವೆ. ನಾವೂ ಒಂದಿಷ್ಟು ಕಲಿಯುತ್ತೇವೆ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಶಫೀವುಲ್ಲಾ, ಪುರಸಭೆ ಮಾಜಿ ಸದಸ್ಯ ನಿಸಾರ್ ಅಹ್ಮದ್ ಕುಂಜಾಲಿ ಇದ್ದರು. ನೇಹಾ ಪ್ರಾರ್ಥಿಸಿದರು. ಮುಖ್ಯಶಿಕ್ಷಕಿ ಶಬೀನಾ ಬೇಗಂ ಸ್ವಾಗತಿಸಿದರು. ಕೀರ್ತಿ ವಂದಿಸಿದರೆ, ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.