

ಮಾನ್ವಿ: ವಿದ್ಯಾರ್ಥಿಗಳು ಪಠ್ಯಪುಸ್ತಕ ಓದುವುದಕ್ಕಿಂತಲೂ ನಾಟಕದ ದೃಶ್ಯಗಳ ಮೂಲಕ ಕಲಿತರೆ ವಿಷಯಗಳು ಹೆಚ್ಚು ನೆನಪಿನಲ್ಲಿರುತ್ತವೆ ಎಂದು ನೇತಾಜಿ ಪಿಯು ಕಾಲೇಜಿನ ಪ್ರಾಚಾರ್ಯೆ ಕೆ.ವಿಜಯಲಕ್ಷ್ಮೀ ಹೇಳಿದರು.
ಪಟ್ಟಣದ ನೇತಾಜಿ ಪಿಯು ಕಾಲೇಜಿನಲ್ಲಿ ರಾಯಚೂರಿನ ಮುಖಾಮುಖಿ ರಂಗ ತಂಡದ ಕಲಾವಿದರು ಪ್ರದರ್ಶಿಸಿದ ಡಾ.ಚಂದ್ರಶೇಖರ ಕಂಬಾರರ ಭೋಳೇ ಶಂಕರ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ನೋಡುವ ಮೂಲಕ ಕಲಿಕೆ ನಡೆದರೆ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ ಎಂದರು.
ನಾಟಕಗಳ ಉದ್ದೇಶ ಮನರಂಜನೆ ನೀಡುವುದಷ್ಟೇ ಅಲ್ಲ. ನಮ್ಮ ಬದುಕು ಹೇಗಿರಬೇಕೆಂಬುದನ್ನು ತಿಳಿಸಿಕೊಡುತ್ತವೆ. ಇತ್ತೀಚೆಗೆ ರಂಗಕಲೆ ಅನವತಿಯ ಅಂಚಿನಲ್ಲಿದೆ. ಕಲಾವಿದರನ್ನು ನೋಡಲು ಹೆಚ್ಚು ನಾಟಕಗಳನ್ನು ನೋಡಬೇಕು ಎಂದು ಕೆ.ವಿಜಯಲಕ್ಷ್ಮೀ ತಿಳಿಸಿದರು. ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಇ.ನರಸಿಂಹ, ಮುಖ್ಯ ಶಿಕ್ಷಕಿ ಅನಿಸಾ ಫಾತೀಮಾ, ಬಸವರಾಜ ಇತರರು ಇದ್ದರು.