ನಮ್ಮೊಳಗಿನ ಪ್ರತಿಭೆ ಅರಿಯಲು ರಂಗಭೂಮಿ ವೇದಿಕೆ

2 - Copy
Published on

ಮೈಸೂರು: ರಂಗಭೂಮಿ ಏಕಮುಖಿಯಲ್ಲ. ಅದು ಬಹುಮುಖಿ. ಕೊಡು, ಕೊಳ್ಳುವಿಕೆಯ ಮೂಲಕ ತಿಳಿಯುವುದು ಹಾಗೂ ಕಲಿಯುವ ಅವಕಾಶವಿದೆ ಎಂದು ಲೇಖಕ ಪ್ರೊ.ಕೃಷ್ಣಮೂರ್ತಿ ಚಂದರ್ ಹೇಳಿದರು.


ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನ ಗುಬ್ಬಿ ವೀರಣ್ಣ ಪೀಠವು ಮೂರು ದಿನಗಳ ಕಾಲ ಆಯೋಜಿಸಿರುವ ರಂಗ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ರಂಗ ಕಾರ್ಯಾಗಾರಗಳ ಮೂಲಕ ನಮ್ಮೊಳಗಿನ ಪ್ರತಿಭೆ ಹಾಗೂ ಸಾಮರ್ಥ್ಯದ ಹುಡಕಾಟ ನಡೆಸಬಹುದು ಎಂದರು.

ಯಾವುದೇ ಕೃತಿ ಓದಿದಾಗ ಹಾಗೂ ನಾಟಕ ನೋಡಿದಾಗ ಕೃತಿಕಾರ ಹಾಗೂ ರಂಗ ನಿರ್ದೇಶಕನಿಗೆ ತಮ್ಮ ಅಭಿಪ್ರಾಯ ಹೇಳಬೇಕು. ಹಾಗಾದಾಗ ಮಾತ್ರವೇ ಸಾಹಿತ್ಯ ಹಾಗೂ ಸಂಸ್ಕೃತಿ ಬೆಳೆಸಲು ಸಾಧ್ಯವೆಂದು ಲೇಖಕ ಯು.ಆರ್.ಅನಂತಮೂರ್ತಿ ಹೇಳುತ್ತಿದ್ದರು ಎಂದು ಸ್ಮರಿಸಿದರು.
ಗುಬ್ಬಿ ವೀರಣ್ಣ ಅವರ ನಾಟಕಗಳಲ್ಲಿ ಆನೆಗಳು ವೇದಿಕೆಗೆ ಬರುತ್ತಿದ್ದವು. ಮಹಾಭಾರತದ ವಿಷ್ಣು ಚಕ್ರದ ಜಾದೂ ಪ್ರೇಕ್ಷಕರನ್ನು ಸೆಳೆಯುತ್ತಿತ್ತು. ಭವ್ಯವಾಗಿರುವ ಕನ್ನಡ ರಂಗಭೂಮಿಯ ಇತಿಹಾಸವನ್ನು ತಿಳಿಯುವ ಪ್ರಯತ್ನವನ್ನು ಶಿಬಿರಾರ್ಥಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ಮಾತನಾಡಿ, ಕನ್ನಡ ರಂಗಭೂಮಿಗೆ ಮೈಸೂರಿನ ಹವ್ಯಾಸಿ ರಂಗತಂಡಗಳ ಕೊಡುಗೆ ಮಹತ್ತರವಾಗಿದ್ದು, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿದ್ದವರು ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು ಎಂದರು.
ಹವ್ಯಾಸಿ ರಂಗಭೂಮಿಯಲ್ಲಿ ಕಾಲೇಜು ಅಧ್ಯಾಪಕರು ಇತ್ತೀಚೆಗೆ ಕ್ರಿಯಾಶೀಲರಾಗಿಲ್ಲ. ಮತ್ತೆ ಆಸಕ್ತಿ ಹುಟ್ಟಿಸುವ ಕೆಲಸವಾಗಬೇಕಿದೆ ಎಂದರು. ಲಲಿತಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿಟ ವಿಮ್ಲಾ ಬ್ರ್ಯಾಗ್ಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net