ಚಿತ್ರರಂಗಕ್ಕೆ ರಂಗಕಲೆಯೇ ತಳಹದಿ

kdr sanmana
ಕಡೂರು ತಾಲೂಕಿನ ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಾಲಯದಲ್ಲಿ ನಡೆದ ರಂಗಗೀತೆಗಳ ಪ್ರಸ್ತುತಿ ಕಾರ್ಯಕ್ರಮದಲ್ಲಿ ರಂಗನಿರ್ದೇಶಕ ವೈ.ಎಂ.ಪುಟ್ಟಣ್ಣಯ್ಯ ಅವರನ್ನು ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ. ಎಂ.ಟಿ.ಸತ್ಯನಾರಾಯಣ ಸನ್ಮಾನಿಸಿದರು.
Published on

ಕಡೂರು: ಚಿತ್ರರಂಗಕ್ಕೆ ರಂಗಕಲೆಯೇ ತಳಹದಿ. ರಂಗಕಲೆಯನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೂ ಉಳಿಸಲು ಕನ್ನಡ ಸಂಸ್ಕೃತಿ ಇಲಾಖೆ ಹೆಚ್ಚು ಒತ್ತು ನೀಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈಸೂರಿನ ರಂಗನಿರ್ದೇಶಕ ವೈ.ಎಂ.ಪುಟ್ಟಣ್ಣಯ್ಯ ಹೇಳಿದರು.

ಮಲ್ಲೇಶ್ವರದ ಸ್ವರ್ಣಾಂಬ ದೇವಸ್ಥಾನದಲ್ಲಿ ಗುರುವಾರ ನಡೆದ ರಂಗಗೀತೆಗಳ ಪ್ರಸ್ತುತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಖ್ಯಾತಿ ಪಡೆದ ಹಿರಿಯ ನಟರೆಲ್ಲರೂ ರಂಗನಟರಾಗಿದ್ದರು. ಪ್ರೇಕ್ಷಕರಿಗೆ ಮನರಂಜನೆ ಜತೆ ಶಿಕ್ಷಣ ಜ್ಞಾನವನ್ನೂ ರಂಗಕಲೆ ನೀಡುತ್ತಿತ್ತು ಎಂದರು.
ನಾಟಕಗಳಲ್ಲಿದ್ದಂತಹ ಹಳೆಯ ರಂಗಗೀತೆಗಳು ಅತ್ಯಂತ ಮನೋಜ್ಞ ಮತ್ತು ಅರ್ಥವತ್ತಾಗಿವೆ. ರಂಗಗೀತೆಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಆಧುನಿಕತೆ ನಡುವೆ ಜೀವಂತ ಕಲೆಯೆನಿಸಿದ ರಂಗಕಲೆ ನೇಪಥ್ಯಕ್ಕೆ ಸರಿಯುತ್ತಿರುವುದು ವಿಷಾದಕರ ಸಂಗತಿ. ಗ್ರಾಮೀಣ ಭಾಗಗಳಲ್ಲಿ ಈ ಕಲೆ ಒಂದಿಷ್ಟು ಉಳಿದುಕೊಂಡಿದೆ. ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಇದರ ಪ್ರಾಮುಖ್ಯತೆ ತಿಳಿಸುವ ಕಾರ್ಯವಾಗಬೇಕಿದೆ. ಕನ್ನಡ ಸಂಸ್ಕೃತಿ ಇಲಾಖೆ ಇದರತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ. ಎಂ.ಟಿ.ಸತ್ಯನಾರಾಯಣ ಮಾತನಾಡಿ, ದೇವಸ್ಥಾನದ ಇತಿಹಾಸದಲ್ಲಿ 60 ವರ್ಷಗಳಿಂದ ನಾಟಕ ರಂಗಕ್ಕೆ ಪ್ರೋತ್ಸಾಹ ನೀಡುತ್ತ ಬಂದಿದೆ. ಗ್ರಾಮಸ್ಥರೇ ಪಾತ್ರಧಾರಿಗಳಾಗಿ ರಾಮಾಯಣ, ಮಹಾಭಾರತದಂತಹ ಪೌರಾಣಿಕ ನಾಟಕಗಳನ್ನು ಆಯೋಜಿಸಲಾಗುತ್ತಿತ್ತು. ಹಿರಿಯ ರಂಗ ನಿರ್ದೇಶಕ ಮುದ್ದರಂಗಪ್ಪ, ಗುಬ್ಬಿ ಕಂಪನಿ ಕಲಾವಿದರೂ ಇಲ್ಲಿಗೆ ಬರುತ್ತಿದ್ದರು ಎಂದು ಸ್ಮರಿಸಿದರು.
ಪುಟ್ಟಣ್ಣಯ್ಯನವರು ಕೃಷ್ಣಗಾರುಡಿ, ಸಂಪೂರ್ಣ ರಾಮಾಯಣ, ಸದಾರಮೆ ಮುಂತಾದ ನಾಟಕಗಳ ಆಯ್ದ ಗೀತೆಗಳ ಜತೆ ಬೆಳ್ಳಾವೆ ನರಹರಿ ಶಾಸ್ತ್ರಿ, ಕು.ರಾ.ಸೀ ಅವರ ರಚನೆಗಳನ್ನು ಪ್ರಸ್ತುತಪಡಿಸಿದರು. ಹಿರಿಯ ರಂಗನಟ ಆರ್.ಪರಮಶಿವನ್, ಗುಬ್ಬಿ ವೀರಣ್ಣ, ಸ್ತ್ರೀ ನಾಟಕ ಮಂಡಳಿ ಜತೆಗಿನ ಅನುಭವಗಳನ್ನು ಹಂಚಿಕೊಂಡರು. ಯುವ ರಂಗ ಕಲಾವಿದರಾದ ಸುಪ್ರೀತ್ ಭಾರದ್ವಾಜ್, ಸುರಭಿ, ಭ್ರಮರ ಆಯ್ದ ರಂಗಗೀತೆಗಳನ್ನು ಹಾಡಿದರು.
ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಎಂ.ಆರ್.ಧರ್ಮಣ್ಣ, ಎಂ.ವೈ.ಚಂದ್ರಶೇಖರ, ಸ್ವರ್ಣಾಂಬ ನಾಟಕ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net