ರಂಗಭೂಮಿ ಎಂದಿಗೂ ಜೀವಂತ: ಸಾಣೇಹಳ್ಳಿಶ್ರೀ ಆಶೀರ್ವಚನ

WhatsApp Image 2023-02-25 at 2.49.52 PM
ಬಳ್ಳಾರಿ ನಗರದ ರಾಘವ ಕಲಾಮಂದಿರದಲ್ಲಿ ರಂಗತೋರಣ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಂಪನಿ ನಾಟಕ ಕಲಾವಿದರ ರಾಜ್ಯ ಸಮ್ಮೇಳನವನ್ನು ಸಾಣೇಹಳ್ಳಿಯ ತರಳಬಾಳು ಶ್ರೀಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
Published on

ಬಳ್ಳಾರಿ : ರಂಗಭೂಮಿ ಎಂದಿಗೂ ಜೀವಂತ ಅದು ಸಾಯುವುದಿಲ್ಲ. ಭೂಮಿ ತನ್ನ ಶಕ್ತಿ, ಸತ್ವ ಕಳೆದುಕೊಂಡಿರಬಹುದೇ ಹೊರತು ಬರಡಾಗಿಲ್ಲ. ಗೊಬ್ಬರ, ನೀರು, ವಾತಾವರಣ ಕಲ್ಪಿಸಿದರೆ ಬರಡು ಭೂಮಿ ಉತ್ತಮ ಫಸಲು ನೀಡುವಂತೆ ರಂಗಭೂಮಿಯನ್ನು ತನ್ನ ಹಳೆಯ ವೈಭವಕ್ಕೆ ಮರಳಲಿದೆ ಎಂದು ಸಾಣೇಹಳ್ಳಿಯ ತರಳಬಾಳು ಶ್ರೀಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ರಾಘವ ಕಲಾಮಂದಿರದಲ್ಲಿ ರಂಗತೋರಣ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಂಪನಿ ನಾಟಕ ಕಲಾವಿದರ ರಾಜ್ಯ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.

ನಾಟಕಗಳು ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುತ್ತವೆ. ರಂಗಭೂಮಿ ಅತ್ಯಂತ ಶ್ರೀಮಂತ ಹಾಗೂ ಪರಿಣಾಮಕಾರಿ ಸಮೂಹ ಮಾಧ್ಯಮವಾಗಿದೆ. ಆದರೆ ಇತ್ತೀಚೆಗೆ ಇಲ್ಲಿ ಮೊದಲಿನ ವೈಭವ, ಗೌರವ, ಶ್ರದ್ಧೆ, ಪ್ರಾಮಾಣಿಕತೆಯ ಕೊರತೆ ಕಾಡುತ್ತ್ತಿದೆ. ಅದಕ್ಕೆ ಸಂಘಟನಾ ಶಕ್ತಿ ಬೇಕಿದೆ ಎಂದರು.

ನಾಟಕಗಳು ಸಾರ್ವಜನಿಕರ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಅತ್ಯಂತ ಪರಿಣಾಮಕಾರಿ ಸಾಧನ ಹೊರತು, ಸಮಾಜವನ್ನು ಎಂದಿಗೂ ತಪ್ಪು ದಾರಿಯಲ್ಲಿ ನಡೆಯಲು ಬಿಡುವುದಿಲ್ಲ. ಜನರಿಗೆ ಏನು ಬೇಕೋ ಅದನ್ನು ಕೊಡುವುದಲ್ಲ. ಜನರಿಗೆ ಏನು ಕೊಡಬೇಕು ಎಂಬುದನ್ನು ಆಲೋಚಿಸಿ ನೀಡಬೇಕು. ಪ್ರೇಕ್ಷಕರ ಕೊರತೆ ತುಂಬಲು ಗಿಮಿಕ್ಸ್ ಮಾಡಬೇಕಾದ ಅನಿವಾರ್ಯತೆ ಒಗ್ಗಿಕೊಳ್ಳಬಾರದು. ವಾಸ್ತವತೆಗೆ ಹತ್ತಿರ ಇರುವ ನಾಟಕಗಳನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ನಾಟಕ ಕಂಪನಿಗಳ ಮಾಲೀಕರು ಹಾಗೂ ಕಲಾವಿದರು ಸಂಕಷ್ಟ ಎದುರಿಸುತ್ತಿರುವುದು ನಿಜ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ. ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ತಮ್ಮ ಮೂಲ ಆಶಯದಿಂದ ವಿಮುಖಗೊಳ್ಳಬಾರದು. ಜನಜಾಗೃತಿಗಾಗಿ ರಂಗಭೂಮಿಯನ್ನು ಬಳಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇರಳ ಮಾದರಿಯಲ್ಲಿ 60 ವರ್ಷ ತುಂಬಿದ ಕಲಾವಿದರಿಗೆ 4 ಸಾವಿರ ರೂ. ಮಾಸಾಶನ, ಕಲಾವಿದರ ಮಕ್ಕಳಿಗೆ ಶಿಕ್ಷಣದ ನೆರವು, ಕಲಾವಿದರು ಮೃತಪಟ್ಟರೆ ಕುಟುಂಬಕ್ಕೆ ಸೂಕ್ತ ಪರಿಹಾರ ಸೇರಿದಂತೆ ಅಗತ ಸೌಲಭ್ಯಗಳನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖಮಾಸ್ತರ್, ಪ್ರತಿ ವರ್ಷ ಪ್ರತಿ ಜಿಲ್ಲೆಯಲ್ಲಿ ಇಂತಹ ಸಮ್ಮೇಳನ ನಡೆಯಬೇಕು. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯ ಕಾರಣ ಸರ್ಕಾರದ ನಿರ್ಲಕ್ಷೃ ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ಸೌಲಭ್ಯ ಪಡೆಯಲು ನಾವು ಸತತವಾಗಿ ಗಟ್ಟಿ ಪ್ರಯತ್ನ ಮಾಡಬೇಕು. 33 ಸಾವಿರ ರಂಗಕಲಾವಿದರು ಸೇರಿ ಚಾಟಿ ಬೀಸಿದರೆ ಸರ್ಕಾರ ನಮ್ಮನ್ನು ಪರಿಗಣಿಸುತ್ತದೆ ಎಂದರು.

ಹಿರಿಯ ಕಲಾವಿದ ಬೆಳಗಲ್ಲು ವೀರಣ್ಣ ಮಾತನಾಡಿ, ರಂಗಭೂಮಿಯಲ್ಲಿ ಜ್ಞಾನ, ವಿಜ್ಞಾನ, ಧರ್ಮ, ಸಮಾನತೆ ಎಲ್ಲವೂ ಇವೆ ಎಂದು ತಿಳಿಸಿದರು. ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್, ಜಿಲ್ಲಾ ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಸಿ.ಶ್ರೀನಿವಾಸರಾವ್, ರಂಗತೋರಣ ಅಧ್ಯಕ್ಷ ಆರ್.ಭೀಮಸೇನ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್, ಕರಡಿ ಎರಿಸ್ವಾಮಿ, ಹರೀಶ್ ಹಿರಿಯೂರು ಹಾಗೂ ರಾಜ್ಯದ ವಿವಿಧೆಡೆಗಳಿಂದ 23ಕ್ಕೂ ಹೆಚ್ಚು ನಾಟಕ ಕಂಪನಿಗಳು 600ಕ್ಕೂ ಹೆಚ್ಚು ಕಲಾವಿದರು ಹಾಗೂ ಬಳ್ಳಾರಿಯ ನೂರಾರು ರಂಗಾಸಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net