ರಂಗಭೂಮಿ ಜನರನ್ನು ತಲುಪುವ ಪ್ರಭಾವಿ ಮಾಧ್ಯಮ

24 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜಕೀಯ, ಸಾಮಾಜಿಕ, ವಿಚಾರಗಳನ್ನು ಹುಟ್ಟು ಹಾಕುವ, ಚಿಂತನೆ ಮೂಡಿಸುವ, ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ನಾಟಕಗಳನ್ನು ರಂಗಾಯಣಗಳು ಪ್ರಸ್ತುತ ಪಡಿಸುವ ಮೂಲಕ ಜನರನ್ನು ಸರಳವಾಗಿ ತಲುಪುವ ಪ್ರಭಾವಿ ಮಾಧ್ಯಮವಾಗಿದೆ ಎಂದು ರಂಗ ನಿರ್ದೇಶಕ ರುಘುನಂದನ ಹೇಳಿದರು.
ನಗರದ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ರಂಗಋಷಿ ಬಿ.ವಿ.ಕಾರಂತರ ಜನ್ಮದಿನ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗಭೂಮಿಯನ್ನು ಉಳಿಸಿ, ಬೆಳೆಸುವಲ್ಲಿ ಕಾರಂತರು ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಂತ ಸರಳ ವ್ಯಕ್ತಿತ್ವವುಳ್ಳ ರಂಗಕರ್ಮಿಯನ್ನು ಇಂದಿನ ಜನಾಂಗ ಕಳೆದುಕೊಂಡಿದೆ. ಯಾವುದೇ ಫಲಾಪೇಕ್ಷೆ ಬಯಸದೆ ರಂಗಭೂಮಿಯ ಬೆಳವಣಿಗೆಗಾಗಿ ಶ್ರಮಿಸಿದ, ಸ್ವಾಭಿಮಾನ ಹೊಂದಿದ ಕಾರಂತರು ಎಲ್ಲರೊಂದಿಗೆ ಆತ್ಮೀಯತೆ ಹಾಗೂ ಸ್ನೇಹಮಯ ಭಾವನೆ ಹೊಂದಿದವರಾಗಿದ್ದರು ಎಂದರು.
ರಂಗಾಯಣಗಳು ಜನರನ್ನು ತಲುಪುವಂತಹ ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಬೇಕು. ಒಂದು ನಾಟಕ ಸಿದ್ಧವಾಗಲು ಅದಕ್ಕೆ ತನ್ನದೇ ಆದ ತಯಾರಿ ಇರುತ್ತದೆ. ಹೀಗೆ ಸಿದ್ಧಗೊಂಡ ನಾಟಕವನ್ನು ಮೊದಲು ಸಣ್ಣ ಸಣ್ಣ ಊರುಗಳಲ್ಲಿ ಪ್ರದರ್ಶನ ಮಾಡಿ, ನಂತರ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಮಾಡುವ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಬೇಕು ಎಂದರು.
ರಂಗಾಯಣ ನಿರ್ದೇಶಕ ಡಾ.ರಾಜು ತಾಳಿಕೋಟೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಮಹಾದೇವ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಡಾ. ಪ್ರಕಾಶ ಗರುಡ, ಮಲ್ಲಿಕಾರ್ಜುನ ಹಿರೇಮಠ, ಶ್ರೀರಾಮ ಭಟ್ಟ, ಶ್ಯಾಮಸುಂದರ, ಮಾಲತಿ ಪಟ್ಟಣಶೆಟ್ಟಿ, ಡಿ.ಎಸ್​.ಚೌಗಲೆ, ಬಿ.ಐ ಈಳಗೇರ, ಶಶಿಧರ ನರೇಂದ್ರ, ಮಹದೇವ ಹಡಪದ, ಮಧು ದೇಸಾಯಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net