

ವಿಜಯವಾಣಿ ಸುದ್ದಿಜಾಲ ಧಾರವಾಡ
ಬದುಕಿನ ಸಂಗತಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂವಹನಗೊಳಿಸುವ ಶಕ್ತಿ ರಂಗಭೂಮಿಗಿದೆ ಎಂದು ಹಿರಿಯ ರಂಗಕರ್ಮಿ ವಿಶ್ವೇಶ್ವರಿ ಹಿರೇಮಠ ಅಭಿಪ್ರಾಯಪಟ್ಟರು.
ನಗರದ ರಂಗಾಯಣ ಆವರಣದಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕಾರಿಗನೂರಿನ ಕೃತಿ ಆಕೃತಿ ಕಲಾಟ್ರಸ್ಟ್ ಸೋಮವಾರ ಆಯೋಜಿಸಿದ್ದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ನಾಟಕಗಳು ಕಡಿಮೆಯಾಗುತ್ತಿದ್ದರೂ ಅಲ್ಲಲ್ಲಿ ಕೆಲ ಸಂಘಟನೆಗಳು ಗುಣಮಟ್ಟದ ರಂಗಭೂಮಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ರಂಗಭೂಮಿ ಚಟುವಟಿಕೆಗಳಿಗೆ ಸರ್ಕಾರ, ಸಂಘ, ಸಂಸ್ಥೆಗಳು ಸಹಕಾರ ನೀಡಬೇಕು. ಉತ್ಕೃಷ್ಟ ಕಲಾ ಪ್ರಕಾರ ನಾಟಕವನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.
ರಜನಿ ಗರುಡ, ಟ್ರಸ್ಟ್ ಅಧ್ಯಕ್ಷ ಸೋಮು ಕಾರಿಗನೂರು, ಇತರರು ಇದ್ದರು. ನಂತರ ಡಾ. ಗಿರಡ್ಡಿ ಗೋವಿಂದರಾಜ ಅವರ ಶಾವಿಯ ಕನಸು ಕಥೆಯನ್ನು ರಂಗರೂಪಕ್ಕೆ ಅಳವಡಿಸಿ, ಸೋಮು ಕಾರಿಗನೂರ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.