

ಮೈಸೂರು: ರಂಗಭೂಮಿ ಬದುಕಿಗೆ ದಿವ್ಯ ಔಷಧವಾಗಿದ್ದು, ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮುಕ್ತ ವಾತಾವರಣವಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ.ಎಂ.ಎ.ಜಾಹೀದ ಅಭಿಪ್ರಾಯಪಟ್ಟರು.
ಸಂಚಲನ ಮೈಸೂರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದಲ್ಲಿ ಆಯೋಜಿಸಿದ್ದ ‘ಸಂಚಲನ ಯುವ ರಂಗ ತರಬೇತಿ ಶಿಬಿರ -2024’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬಹಳ ಸಂಕೋಚ ಸ್ವಭಾವದವಳಾಗಿದ್ದ ನನ್ನನ್ನು, ಏನೂ ಸಾಧಿಸೋಕೆ ಸಾಧ್ಯ ಇಲ್ಲ ಅಂದುಕೊಂಡಿದ್ದೆ. ಆದರೆ ಸಾಧ್ಯವಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಲಿಕ್ಕೆ ಬೇಕಾದ ಮಾರ್ಗದರ್ಶಿ, ಆತ್ಮಸ್ಥೈರ್ಯವನ್ನು ನನ್ನ ಬದುಕಿನಲ್ಲಿ ರಂಗಭೂಮಿ ನೀಡಿದೆ ಎಂದರು ಅವರು ಹೇಳಿದರು. ರಂಗಭೂಮಿಯ ಮುಖಾಂತರ ನಾನು ಬೆಳೆದೆ. ಇಂತಹ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಿಬಿರಕ್ಕೆ ಚಾಲನೆ ನೀಡಿದ ಜಾನಪದ ಗಾಯಕ ದೇವಾನಂದ ವರಪ್ರಸಾದ್, ರಂಗಭೂಮಿಯ ವಿಶೇಷತೆ ಕಾರ್ಯ ಚಟುವಟಿಕೆ ಮತ್ತು ರಂಗಭೂಮಿಯ ಕೊಡುಗೆಗಳ ಬಗ್ಗೆ ಯುವಕರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ಶಿಬಿರದಲ್ಲಿ ಆಡಬಹುದು, ಕುಣಿಯಬಹುದು, ನೇರವಾಗಿ ನಿಮ್ಮ ತಪ್ಪುಗಳನ್ನು ತಿಳಿಸಿದಾಗ ತಿದ್ದಿಕೊಳ್ಳಬಹುದು. ಆ ರೀತಿಯ ಒಂದು ಮುಕ್ತ ವಾತಾವರಣ ರಂಗಭೂಮಿಯಲ್ಲಿ ಮಾತ್ರ. ಕಾರಾಗೃಹ ವಾಸಿಗಳಲ್ಲಿಯೂ ರಂಗಭೂಮಿ ಚಟುವಟಿಕೆ ಪರಿವರ್ತನೆಯನ್ನು ಬೀರಿದೆ ಎಂದು ಹೇಳಿದರು.
ರಂಗ ನಿರ್ದೇಶಕ ದಿಗ್ವಿಜಯ ಹೆಗ್ಗೋಡು ಮಾತನಾಡಿ, ರಂಗಭೂಮಿ ಅಥವಾ ಯಾವುದೇ ಕಲೆ ದಬ್ಬಾಳಿಕೆಯ ವಿರುದ್ಧ ಪುಟಿದೇಳುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಯುವ ಮನಸ್ಸುಗಳು ಹೆಚ್ಚು ರಂಗಭೂಮಿ ಮತ್ತು ಯಾವುದೇ ಕಲೆಯ ಅಭ್ಯಾಸದಲ್ಲಿ ತೊಡಗಿಕೊಂಡರೆ ಬದುಕು ಅರ್ಥಪೂರ್ಣವಾಗಿರುತ್ತದೆ ಎಂದರು. ಉಪನ್ಯಾಸಕ ಡಾ.ನವೀನ್, ಶಿಬಿರದ ನಿರ್ದೇಶಕ ದೀಪಕ್ ಮಾತನಾಡಿದರು.