ಕಲಾ ಪ್ರಕಾರಗಳಲ್ಲೇ ರಂಗಭೂಮಿ ಶಕ್ತಿ ಹೆಚ್ಚು

CTD 27 LIL BORUKS-06
Published on

ಚಿತ್ರದುರ್ಗ: ರಂಗಭೂಮಿಗೆ ಸಾವಿಲ್ಲ. ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುವ ರಂಗಭೂಮಿ ಕಲಾಪ್ರಕಾರಗಳಲ್ಲೇ ಅತ್ಯಂತ ಶಕ್ತಿಯುತವಾದ ಮಾಧ್ಯಮವಾಗಿದೆ ಎಂದು ರಂಗವಿಮರ್ಶಕ ಡಾ.ವಿ.ಬಸವರಾಜ ಅಭಿಪ್ರಾಯಪಟ್ಟರು.

ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಭೂತ, ವರ್ತಮಾನ ಹಾಗೂ ಭವಿಷ್ಯದ ದಿನಗಳನ್ನು ಒಟ್ಟುಗೂಡಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ ಎಂದರು.

ರಂಗ ಸನ್ಮಾನ ಸ್ವೀಕರಿಸಿದ ವೃತ್ತಿರಂಗಭೂಮಿ ಕಲಾವಿದೆ ಶಾಂತಕುಮಾರಿ ಸಿದ್ದೇಶ್ವರಿ ಮಾತನಾಡಿ, ವೃತ್ತಿರಂಗಭೂಮಿ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು. ನಾವು ನೂರಾರು ನಾಟಗಳಲ್ಲಿ ಅಭಿನಯಿಸಿದರೂ ನಮ್ಮನು ಯಾರು ಸರಿಯಾಗಿ ಗುರುತಿಸುತ್ತಿಲ್ಲ. ನಮ್ಮ ಕಲೆಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ ಎಂದು ಬೇಸರಿಸಿದರು.

ಉಪನ್ಯಾಸಕ ಡಾ.ಕೆ.ಮೋಹನ್ ಕುಮಾರ್ ಮಾತನಾಡಿ, ರಂಗಭೂಮಿ ಮಕ್ಕಳಿಗೆ ಸುಲಭವಾಗಿ ತಲುಪುವ ಮಾಧ್ಯಮವಾಗಿದೆ. ರಂಗಪಠ್ಯ ಚಟುವಟಿಕೆಗಳು ಮಗುವಿನ ಸೃಜನಶೀಲ ಸಂವೇದನೆಗಳನ್ನು ಜಾಗೃತಗೊಳಿಸುತ್ತದೆ ಎಂದರು.

ಕಲಾವಿದ ಚನ್ನಬಸಪ್ಪ ರಂಗಗೀತೆ ಗಳನ್ನು ಪ್ರಸ್ತುತಪಡಿಸಿದರು. ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ನಿರ್ದೇಶಕಿ ಜ್ಯೋತಿ ಬಾದರದಿನ್ನಿ ರಂಗ ಸಂದೇಶ ವಾಚಿಸಿದರು. ಅಕಾಡೆಮಿ ಅಧ್ಯಕ್ಷೆ ಅನುಸೂಯಾ ಬಾದರದಿನ್ನಿ, ಕಾರ‌್ಯದರ್ಶಿ ಪ್ರಕಾಶ್ ಬಾದರದಿನ್ನಿ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಶ್ರೀನಿವಾಸ ಮಳಲಿ, ಶ್ರೀಕುಮಾರ, ಎಸ್.ಸಿ.ಗಿರೀಶ್, ಗುರುಕಿರಣ, ಕುಶಾಲ್, ಕಿರಣ್ ಇತರರು ಇದ್ದರು.

ಕನ್ನಡ ರಂಗಕೃತಿಗಳಿಗೆ ಮಹತ್ವದ ಸ್ಥಾನ

ನವರಸಗಳೊಂದಿಗೆ ಉತ್ತಮ ಅಭಿನಯ, ಥಾವಸ್ತುಗಳನ್ನು ಒಳಗೊಂಡಿರುವ ಕನ್ನಡದ ನಾಟಕ ಕೃತಿಗಳು ಭಾರತೀಯ ರಂಗಭೂಮಿಯಲ್ಲಿ ಮಹತ್ವದ ಸ್ಥಾನ ಪಡೆದಿವೆ ಎಂದು ಸಾಹಿತಿ ಜಿ.ಎಸ್.ಉಜ್ಜಿನಪ್ಪ ಹೇಳಿದರು.

ಚಿತ್ರದುರ್ಗದ ರಂಗಸೌರಭ ಕಲಾಸಂಘ, ಕನ್ನಡ ಮತ್ತು ಸಂ ಸ್ಕೃತಿ ಇಲಾಖೆ, ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮೌಲ್ಯಯುತ ಕಾರ‌್ಯಕ್ರಮಗಳಲ್ಲಿ ಜನರ ಆಸಕ್ತಿ ಕಡಿಮೆಯಾಗುತ್ತಿದ್ದು, ಫ್ಯಾಷನ್ ಬದುಕಿನ ಈ ಸಂದರ್ಭದಲ್ಲಿ ರಂಗ ಜಾಗೃತಿಯ ಕೆಲಸವಾಗಬೇಕಿದೆ. ಸತ್ವಯುತ ಬದುಕಿಗೆ ರಂಗಭೂಮಿಯ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ ಮಾತನಾಡಿ, ಜಿಲ್ಲಾದ್ಯಂತ ರಂಗಭೂಮಿ ಚಟುವಟಿಕೆಗಳು ನಿರಂತರ ನಡೆಯುತ್ತಿವೆ. ರಂಗಭೂಮಿ ಮುಖೇನ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ನಡೆಯಬೇಕಿದೆ. ಸಾಣೇಹಳ್ಳಿಯ ಶಿವಸಂಚಾರ, ಜಮುರಾ, ರಂಗಸೌರಭ ರಂಗೋತ್ಸವದ ನಾಟಕಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ರಂಗಭೂಮಿ ಸಹಕಾರಿಯಾಗಿದೆ ಎಂದರು.

ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಅವರು ಈಜಿಪ್ಟ್‌ನ ಅಭಿನೇತ್ರಿ ಸಮಿಹಾ ಅಯೌಬ್ ವಿರಚಿತ ರಂಗ ಸಂದೇಶ ವಾಚಿಸಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ಸಾಹಿತಿ ಎಂ.ಮೃತ್ಯುಂಜಯಪ್ಪ, ಕಲಾವಿದ ಜಿ.ಎನ್. ಚಂದ್ರಪ್ಪ, ಶ್ರೀನಿವಾಸ್ ಮಳಲಿ, ಪ್ರಕಾಶ್ ಬಾದರದಿನ್ನಿ, ಶೈಲಶ್ರೀ ಹಿರೇಮಠ್, ಬಿ.ಜಿ.ಲೀಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net