

ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ರಂಗಕಲೆ ಕಲಿಸುವ ಆಸಕ್ತಿ ತೋರದೆ ಕೇವಲ ಪಾಶ್ಚಿಮಾತ್ಯ ಪ್ರೇರಿತ ಸಿದ್ಧಾಂತಗಳನ್ನು ಕಲಿಸುತ್ತಿದೆ ಎಂದು ನಾಟಕಕಾರ ಡಾ.ಎಚ್.ಎಸ್.ಶಿವಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊ ಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಈ ನೆಲಕ್ಕೆ ಹೊಂದಿಕೆ ಯಾಗದ ಆಧುನಿಕ ಶಿಕ್ಷಣದಿಂದ ಸಾಂಪ್ರದಾಯಿಕ ರಂಗಕಲೆಯು ತನ್ನ ಅಂತಃಸತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೈದರಬಾದ್‌ನ ಇಂಗ್ಲಿಷ್ ಮತ್ತು ವಿದೇಶ ಭಾಷೆಗಳ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ವಿ.ಬಿ. ತಾರಕೇಶ್ವರ್ ಮಾತನಾಡಿ, ಕನ್ನಡ ಸಿನಿಮಾಕ್ಕೆ ವೃತ್ತಿ ರಂಗಭೂಮಿ ಕೊಡುಗೆ ಅಪಾರವಾದದ್ದು. ಪ್ರಾರಂಭದಲ್ಲಿ ರಂಗಭೂಮಿ ಕಲಾವಿದರೇ ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ದಲ್ಲಿ ನಟಿಸಿದರು. ರಂಗಭೂಮಿ ಕಲಾವಿದರು ಹೆಚ್ಚಾಗಿ ಸಿನಿಮಾದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ವೃತ್ತಿ ರಂಗಭೂಮಿಯಲ್ಲಿ ಬದಲಾವಣೆ ಆಯಿತೇ? ರಂಗಭೂಮಿ ಸಿನಿಮಾವನ್ನು ಅನುಕರಣೆ ಮಾಡುತ್ತಿದೆಯೇ ಎಂಬ ಕುರಿತು ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದರು.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದಲ್ಲಿ ಬುಧವಾರ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಂಶೋಧನೆ ಅಂದರೆ ಪುಸ್ತಕ ಬರೆಯುವುದು ಅಂತ ಬಹುತೇಕರು ಅಂದುಕೊಂಡಿದ್ದಾರೆ. ಇದುವರೆಗೆ ಇಲ್ಲದ ಜ್ಞಾನವನ್ನು ಶೋಧಿ ಸುವುದೇ ಸಂಶೋಧನೆ, ಇಲ್ಲವಾದಲ್ಲಿ ಅದು ವಿಮರ್ಶೆ ಆಗುತ್ತದೆ. ಬೇರೊಂದು ಪುಸ್ತಕದಲ್ಲಿರುವ ಮಾಹಿತಿ ಪಡೆದು ಬರೆದರೆ ಅದನ್ನು ಸಂಶೋಧನೆ ಅನ್ನಲು ಸಾಧ್ಯವಿಲ್ಲ. ಹಾಗಾಗಿ ಸಂಶೋಧಕರು ಗುಣಮಟ್ಟದ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ರಂಗಭೂಮಿ ಕಡೆಗೆ ಇತ್ತೀಚೆಗೆ ಜನರು ಆಕರ್ಷಿತರಾಗುತ್ತಿದ್ದಾರೆ. 25 ವರ್ಷಗಳ ಹಿಂದೆ ಇಷ್ಟೊಂದು ಸಂಖ್ಯೆಯಲ್ಲಿ ಜನರು ರಂಗಭೂಮಿಯ ಕಡೆಗೆ ಬರುತ್ತಿರಲಿಲ್ಲ. ಹೀಗಾಗಿ ರಂಗಭೂಮಿಯ ಹೊಸ ಆಯಾಮಗಳ ಕುರಿತು ಸಂಶೋಧನೆ ನಡೆಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಕುಲಪತಿ ಡಾ. ಶರಣಪ್ಪ ವಿ. ಹಲ್ಸೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಗೀತ ವಿವಿ ಕುಲಪತಿ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಟಿ.ಎಸ್. ದೇವರಾಜ, ರಂಗಭೂಮಿ ಕಲಾವಿದರಾದ ಬಾಬು ಹಿರಣ್ಣಯ್ಯ, ಡಾ.ಜೆ. ಶ್ರೀನಿವಾಸಮೂರ್ತಿ, ರಂಗ ನಿರ್ದೇಶಕ ಪ್ರೊ.ಎಸ್.ಆರ್. ರಮೇಶ್ ಹಾಗೂ ಇತರರು ಇದ್ದರು.