ಧಾರ್ವಿುಕ ಸಭೆ, ಕಾರ್ಯಕ್ರಮ ನಡೆಸಲು ರಂಗ ಮಂದಿರ ಸಹಕಾರಿ

UPBR BHUMI POOJE
Published on

ಉಪ್ಪಿನಬೆಟಗೇರಿ: ಧಾರ್ವಿುಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕೆಲಸಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಹೇಳಿದರು.

ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಗ್ರಾಪಂ ವತಿಯಿಂದ ನಿರ್ವಿುಸಲು ಉದ್ದೇಶಿಸಿರುವ ಬಯಲು ರಂಗ ಮಂದಿರಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರತಿ ವರ್ಷ ನಡೆಯುವ ಶ್ರೀ ವಿರೂಪಾಕ್ಷೇಶ್ವರ ಜಾತ್ರೆಯಲ್ಲಿ ನಡೆಯುವ ಧಾರ್ವಿುಕ ಸಭೆ ಹಾಗೂ ಕಾರ್ಯಕ್ರಮಗಳಿಗೆ ಈ ಬಯಲು ರಂಗ ಮಂದಿರ ಅನುಕೂಲವಾಗಲಿದೆ ಎಂದರು.

ಗ್ರಾಪಂ ಅಧ್ಯಕ್ಷ ಬಸೀರಅಹ್ಮದ್ ಮಾಳಗಿಮನಿ ಮಾತನಾಡಿ, ನಮ್ಮ ಶ್ರೀಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿಗಳು ಬಸವ ಪುರಾಣದ ಮೂಲಕ ನಮ್ಮೂರಿನ ಖ್ಯಾತಿಯನ್ನು ರಾಜ್ಯದ ಮೂಲೆ ಮೂಲೆಗೂ ಪರಿಚಯಿಸಿದ್ದಾರೆ. ತಮ್ಮ ಜೋಳಿಗೆ ಹಾಗೂ ಸರ್ಕಾರದ ಅನುದಾನದ ಮೂಲಕ ಶ್ರೀಮಠವನ್ನು ಶಿಲಾಮಠವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದೀಗ ನಮ್ಮ ಪಂಚಾಯಿತಿಗೂ ರಂಗ ಮಂದಿರ ನಿರ್ವಿುಸಿಕೊಡುವಂತೆ ಬೇಡಿಕೆ ಇಟ್ಟಿದ್ದು, ಅದರ ಭೂಮಿ ಪೂಜೆ ಕಾರ್ಯ ದೀಗ ಸಂಪನ್ನಗೊಂಡಿದೆ. ಗುತ್ತಿಗೆದಾರರು ಗುಣಮಟ್ಟದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು. ಕುಮಾರ ವಿರೂಪಾಕ್ಷ ಸ್ವಾಮೀಜಿ ಪಂಚಾಯಿತಿಯ ಕಾರ್ಯವೈಖರಿ ಪ್ರಶಂಸಿಸಿದರು.

ಜಿಪಂ ಮಾಜಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಬಾಬಾ ಮೊಯಿನುದ್ದಿನ್ ಚೌಧರಿ, ವಿದ್ಯಾದಾನ ಸಮಿತಿ ಗೌರವ ಕಾರ್ಯದರ್ಶಿ ಜಿ.ಆರ್. ಜವಳಗಿ, ಮಂಜುನಾಥ ಸಂಕಣ್ಣವರ, ಕಲ್ಲಪ್ಪ ಬೊಬ್ಬಿ, ಪಿಡಿಒ ಬಿ.ಎ. ಬಾವಾಕಾನವರ, ಗ್ರಾಪಂ ಸದಸ್ಯರಾದ ಮುಸ್ತಾಕ ನದಾಫ್, ಅಬ್ದುಲ್ ಲಂಗೋಟಿ, ಸುರೇಶಬಾಬು ತಳವಾರ, ಈರಯ್ಯ ಗೌರಿಮಠ, ನಾಗಪ್ಪ ಕಳ್ಳಿ, ಮುಸ್ತಾಕ್ ಮುಜಾವರ, ನೂರ ಅಹ್ಮದ್ ಮುಜಾವರ ಸೇರಿ ಗ್ರಾಮಸ್ಥರು ಹಾಜರಿದ್ದರು. ಗ್ರಾಪಂ ಸಿಬ್ಬಂದಿ ವಿರೂಪಾಕ್ಷಪ್ಪ ಬಮ್ಮಶೆಟ್ಟಿ ಹಾಗೂ ಫಕೀರಪ್ಪ ಶಿವಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net