

ನರೇಗಲ್ಲ: ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಮಕ್ಕಳಂತೆ ಅಭಿನಯ, ನೃತ್ಯ ತರಬೇತಿ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಬೇಕು ಎಂಬ ಆಶಯದೊಂದಿಗೆ ಕರ್ನಾಟಕ ನಾಟಕ ಅಕಾಡೆಮಿ ಇದೇ ಮೊದಲ ಬಾರಿಗೆ ಶ್ರವಣದೋಷವುಳ್ಳ ಮಕ್ಕಳಿಗೆ ರಂಗ ತರಬೇತಿ ಶಿಬಿರ ಆಯೋಜಿಸಿದೆ ಎಂದು ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಹಡಪದ ಹೇಳಿದರು.
ಪಟ್ಟಣದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವುಡ ಮಕ್ಕಳ ಶಾಲೆಯಲ್ಲಿ ಶ್ರವಣದೋಷ ವಿದ್ಯಾರ್ಥಿಗಳಿಗೆ ರಂಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿನ ಮಕ್ಕಳು ಅಭಿನಯ, ನೃತ್ಯ ತರಬೇತಿ ಪಡೆದು ನಾಟಕ, ಚಲನಚಿತ್ರ, ಧಾರಾವಾಹಿಗಳಲ್ಲಿ ಅಭಿನಯಿಸಿ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಮನ್ವಯಗೊಳಿಸುವಲ್ಲಿ ಶಿಬಿರವನ್ನು ಯಶಸ್ವಿಯಾಗಬೇಕು ಎಂದರು.
ರಂಗ ಶಿಬಿರದ ನಿರ್ದೇಶಕ ಆರ್.ಕೆ. ಬಾಗವಾನ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವಿಶೇಷ ಮಕ್ಕಳಿಗೆ ರಂಗ ತರಬೇತಿ ನೀಡುವುದು ಕಷ್ಟಕರ ಕೆಲಸ. ಆದರೂ ಪೂರಕವಾದ ವಾತಾವರಣ ನಿರ್ವಿುಸಿ ಅಗತ್ಯ ತರಬೇತಿ ನೀಡಿ ಶಿಬಿರ ಯಶಸ್ವಿಯಾಗಲು ಎಲ್ಲ ವಿಶೇಷ ಶಿಕ್ಷಕ ಸಿಬ್ಬಂದಿಯೊಂದಿಗೆ ಶ್ರಮಿಸಲಾಗುವುದು ಎಂದರು.
ಆಡಳಿತಾಧಿಕಾರಿ ಎನ್.ಆರ್. ಗೌಡರ ಹಾಗೂ ಆಡಳಿತ ಮಂಡಳಿಯ ಚೇರ್ಮನ್ ಶರಣಪ್ಪ ರೇವಡಿ ಮಾತನಾಡಿ, ಶಿಕ್ಷಕರು ಮತ್ತು ನಿರ್ದೇಶಕರು ಅಂಗವಿಕಲ ಮಕ್ಕಳನ್ನು ತರಬೇತುಗೊಳಿಸಿ ಸಮಾಜಕ್ಕೆ ಪೂರಕವಾದ ರಂಗರೂಪಕ ನೀಡಲು ಪ್ರಯತ್ನಿಸಬೇಕು ಎಂದರು.
ಆಡಳಿತ ಮಂಡಳಿ ಸದಸ್ಯ ಶಿವಯ್ಯ ಚಕ್ಕಡಿಮಠ, ಪ್ರಾಧ್ಯಾಪಕ ಕಲ್ಲಯ್ಯ ಹಿರೇಮಠ, ಎ.ಸಿ. ಮರಡಿಮಠ, ಎಸ್.ವಿ. ಪಾಟೀಲ, ಎ.ಎಸ್. ಚಿಕ್ಕಮಠ, ಎಂ.ವಿ. ಹರ್ಲಾಪೂರ, ಡಿ.ಲಕ್ಷ್ಮಣ, ಎಸ್.ಎ. ಅರಮನಿ, ಎಂ.ಎಫ್. ರೇವಡಿಗಾರ, ಎಸ್.ಕೆ. ರೇಣುಕಮಠ, ಸೌಮ್ಯಾ ಜುಟ್ಲದ, ಬಿ.ಬಿ. ಪಟ್ಟಣಶೆಟ್ಟಿ, ಎ.ಆರ್. ಹುಡೇದಗಟ್ಟಿ, ರಾಚಯ್ಯ ಹಿರೇಮಠ, ನಾಗರಾಜ ಹೊಸಮನಿ, ಇತರರಿದ್ದರು.
ಮುಖ್ಯ ಶಿಕ್ಷಕ ಅಶೋಕ ಕಡೆತೋಟದ, ಶಿಕ್ಷಕ ಬಿ.ಎಸ್. ಗಾಣಿಗೇರ ಹಾಗೂ ಶಿಕ್ಷಕ ಎಲ್.ಎಂ. ತಳಬಾಳ ಕಾರ್ಯಕ್ರಮ ನಿರ್ವಹಿಸಿದರು.