ಮೃಗಾಲಯ ಪ್ರದೇಶ ಈಗ ನಿಶ್ಯಬ್ದ ವಲಯ

mysore-zoo
Published on

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯ ಮತ್ತು ಕಾರಂಜಿಕೆರೆ ಸುತ್ತಲಿನ ರಸ್ತೆಗಳನ್ನು ‘ನಿಶ್ಯಬ್ದ ವಲಯ’ ಎಂದು ಪರಿಗಣಿಸಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅಧಿಸೂಚನೆ ಹೊರಡಿಸಿದ್ದಾರೆ.

ಮೃಗಾಲಯ ಹಾಗೂ ಕಾರಂಜಿ ಕೆರೆಯಲ್ಲಿನ ಸೂಕ್ಷ್ಮ, ಅಪರೂಪ ಮತ್ತು ವಿನಾಶದ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳು ಮತ್ತು ವನ್ಯಜೀವಿಗಳ ಸುರಕ್ಷತೆ ಹಾಗೂ ಮೃಗಾಲಯದ ವೀಕ್ಷಕರ, ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ. ಎಂ.ಎಲ್.ಸೋಮಸುಂದರಂ ವೃತ್ತದಿಂದ ಎಸ್.ಲಿಂಗಣ್ಣ ವೃತ್ತದವರೆಗಿನ ಶಾಲಿವಾಹನ ರಸ್ತೆ, ಎಸ್.ಲಿಂಗಣ್ಣ ವೃತ್ತದಿಂದ ಸರ್ಕಸ್ ಗ್ರೌಂಡ್ ಜಂಕ್ಷನ್ ವರೆಗಿನ ಲೋಕರಂಜನ್ ರಸ್ತೆ, ಸರ್ಕಸ್ ಗ್ರೌಂಡ್ ಜಂಕ್ಷನ್‌ನಿಂದ ಮಹಾರಾಣಾ ಪ್ರತಾಪ ಸಿಂಹ ವೃತ್ತದವರೆಗಿನ ಟ್ಯಾಂಕ್ ಬಂಡ್‌ರಸ್ತೆ, ಮಹಾರಾಣಾ ಪ್ರತಾಪ ಸಿಂಹ ವೃತ್ತದಿಂದ ಎಂ.ಎಲ್, ಸೋಮಸುಂದರಂ ವೃತ್ತದವರೆಗಿನ ಎಂ.ಜಿ.ರಸ್ತೆಗಳನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸಿದ್ದಾರೆ. ಸದರಿ ರಸ್ತೆಯಲ್ಲಿ ಪಟಾಕಿಗಳ ಶಬ್ದ, ಧ್ವನಿವರ್ಧಕ ಹಾಗೂ ವಾಹನಗಳ ಹಾರ್ನ್ ನಿಷೇಧಿಸಿ ಅಧಿಸೂಚನೆ ಹೊರಡಿಸಿದ್ದಾರೆ.

ಮನವಿಗೆ ಸ್ಪಂದನೆ

ಮೃಗಾಲಯವು ವನ್ಯ ಪ್ರಾಣಿಗಳ, ಪಕ್ಷಿ ಸಂಕುಲಗಳ ಹಾಗೂ ದೇಶ ವಿದೇಶಗಳ ಅಪರೂಪದ ಜೀವ ಸಂಕುಲಗಳ ಆವಾಸ ಸ್ಥಾನವಾಗಿದೆ. ಕಾರಂಜಿ ಕೆರೆಯು ಋತುಮಾನಕ್ಕೆ ತಕ್ಕಂತೆ ವಲಸೆ ಪಕ್ಷಿಗಳು ಒಂದು ನೆಲೆಸುವ ನೆಚ್ಚಿನ ತಾಣವಾಗಿದೆ. ಸದರಿ ಪ್ರದೇಶಗಳು ಯಾವಾಗಲೂ ಸೂಕ್ಷ್ಮತೆಯಿಂದ ಕೂಡಿದೆ. ವನ್ಯಜೀವ ಸಂಕುಲ ವಾಸಿಸಲು ಪ್ರಶಾಂತ ವಾತಾವರಣ ಸೃಷ್ಟಿಸುವ ಅವಶ್ಯಕತೆ ಇದೆ. ಮೃಗಾಲಯ ಮತ್ತು ಕಾರಂಜಿಕೆರೆ ಸುತ್ತಲಿನ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ಅಧಿಕವಾಗಿದ್ದು, ಸದರಿ ಪ್ರದೇಶಗಳಲ್ಲಿ ವಾಹನಗಳ ಹಾರ್ನ್, ಹಬ್ಬದ ದಿನಗಳಂದು ಧ್ವನಿವರ್ಧಕಗಳ ಬಳಕೆ ಮತ್ತು ಪಟಾಕಿಗಳ ಬಳಕೆ, ವಾಯು ಮಾಲಿನ್ಯ ಹೆಚ್ಚಾಗಿ ವನ್ಯಜೀವಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸದರಿ ಪ್ರದೇಶವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸಬೇಕು’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಆಯುಕ್ತರಿಗೆ ಮಾಡಿದ್ದ ಮನವಿಗೆ ಈಗ ಸ್ಪಂದನೆ ದೊರಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net