ಹಿಂದು ವಿರಾಟ್ ಗಣೇಶನ ಅದ್ದೂರಿ ವಿಸರ್ಜನೆ

mkg1b
Published on

ಚನ್ನಗಿರಿ": ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಸಂಘಟನೆ ವತಿಯಿಂದ ಪಟ್ಟಣದ ಊರಬಾಗಿಲ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಹಿಂದು ವಿರಾಟ್ ಗಣೇಶನ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ 10 ಗಂಟೆಗೆ ಬಿಜೆಪಿ ಮುಖಂಡ ಎಚ್.ಎಸ್. ಶಿವಕುಮಾರ್ ಗಣಪತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಗಣೇಶನ ರಥದ ಜತೆ ವೀರ ಸಾರ್ವಕರ್, ಬಾಲಗಂಗಾಧರ ತಿಲಕ್ ಭಾವಚಿತ್ರ ಆಳವಡಿಸಲಾಗಿತ್ತು. ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಾಹಾರಾಜ್, ವೀರ ಆಂಜನೇಯ, ಸಂಗೊಳ್ಳಿ ರಾಯಣ್ಣನ ಭಾವಚಿತ್ರಗಳು ರಾರಾಜಿಸಿದವು.

ಪಟ್ಟಣದ ಕಲ್ಲುಸಾಗರ ರಸ್ತೆ, ಕುರುಬರ ಬೀದಿ, ಮರಾಠ ಬೀದಿ, ಗಣಪತಿ ವೃತ್ತ, ಮಸೀದಿ ರಸ್ತೆ, ಉಪ್ಪಾರ ಬೀದಿ ಮೂಲಕ ಜೆಸಿ ರಸ್ತೆ, ನೃಪತುಂಗ ರಸ್ತೆ, ಹಳೇ ತಾಲೂಕು ಕಚೇರಿ ಮೂಲಕ ಗಣಪತಿ ಹೊಂಡಕ್ಕೆ ಗಣೇಶನನ್ನು ತಂದು ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯಲ್ಲಿ ನಾಸಿಕ್ ಡೋಲ್, ತಮಟೆ, ಡೊಳ್ಳು, ಚಂಡೆ, ಆಂಜನೇಯ ವೇಷಧಾರಿಗಳು ಮತ್ತು ವಿವಿಧ ತಂಡಗಳ ನಾದಕ್ಕೆ ಯುವಪಡೆ ಹೆಜ್ಜೆಹಾಕಿ ಹಾಕಿತು. ದಾರಿಯುದ್ದಕ್ಕೂ ಕೇಸರಿ ಬಾವುಟ ರಾರಾಜಿಸಿದವು.

ಮೆರವಣಿಗೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.

ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಜನರು ಮನೆ ಬಾಗಿಲಿನ ಮುಂದೆ ರಂಗೋಲಿ ಮತ್ತು ನೀರು ಹಾಕಿ ಸ್ವಾಗತ ಕೋರಿದರು. ಅಲ್ಲಲ್ಲಿ ಬಾಳೆಹಣ್ಣು, ನೀರು, ತಂಪು ಪಾನಿಯ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net