

ಹುಬ್ಬಳ್ಳಿ: ಭಾರತದ ಪಾಪ್ ಸಿಂಗರ್ ಹಾಗೂ ನಟಿ ಧ್ವನಿ ಭಾನುಶಾಲಿ ಹಾಡು ಮತ್ತು ನೃತ್ಯಕ್ಕೆ ಪಡ್ಡೆ ಹುಡುಗರು ಕೇಕೆ ಹಾಕಿ ಕುಣಿದರೆ, ಯುವತಿಯರು ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದ ಘಟನೆ ನಗರದ ಬಿವಿಬಿ ಕ್ಯಾಂಪಸ್‌ನ ಕೆಎಲ್‌ಇ ತಾಂತ್ರಿಕ ವಿವಿಯ ಮೈದಾನದಲ್ಲಿ ಶನಿವಾರ ನಡೆಯಿತು.
ಮೂರು ದಿನಗಳವರೆಗೆ ಆಯೋಜಿಸಿರುವ ತಾಂತ್ರಿಕ ಸಾಂಸ್ಕೃತಿಕ ಉತ್ಸವ ‘ಪ್ಲೀಡಿಸ್-2025’ 12ನೇ ಆವೃತ್ತಿಯಲ್ಲಿ ಧ್ವನಿ ಹಾಡಿಗೆ ಯುವಕ-ಯುವತಿಯರು ಪ್ರತಿಧ್ವನಿಗೂಡಿಸಿದರು.
ಲೇಜಾ-ಲೇಜಾ, ಸಾರೇ-ತೇರೆ, ದಿಲ್‌ಬರ್-ದಿಲ್‌ಬರ್, ಧಮ್ ಮಾರೋ ಧಮ್ ಸೇರಿ ವಿವಿಧ ಹಾಡುಗಳನ್ನು ಹಾಡಿ ರಂಜಿಸಿದರು. ಹಾಡು ಹಾಡುತ್ತ ನೃತ್ಯ ಮಾಡಿದ ಧ್ವನಿ ಅವರಿಗೆ ಸಹನಟಿಯರೂ ಕುಣಿತದ ಸಾಥ್ ಕೊಟ್ಟರು. ಯುವಕ-ಯುವತಿಯರು ಕೈಯಲ್ಲಿ ಮೊಬೈಲ್ ಫೋನ್ ಬ್ಯಾಟರಿ ಹಚ್ಚಿ ಕುಣಿದರೆ, ಪಾಲಕರು ಕುಳಿತಲ್ಲಿಯೇ ತಲೆದೂಗುತ್ತಿದ್ದರು.