

ಮುಂಡರಗಿ: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಭರವಸೆ ಯೋಜನೆಯಾಗಿರುವ ಯುವನಿಧಿ ಯೋಜನೆ ಇಂದಿನ ಯುವಜನಕ್ಕೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೊರನಾಳ ಹೇಳಿದರು.
ಪಟ್ಟಣದ ಪ್ರಿಯದರ್ಶಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಮತ್ತು ಸಂಚಾರಿ ನೋಂದಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪದವಿ ಮತ್ತು ಡಿಪ್ಲೊಮಾ ಮುಗಿಸಿದ ಯುವ ಜನಾಂಗ ಆರ್ಥಿಕ ತೊಂದರೆಗಳನ್ನು ಎದುರಿಸಬಾರದು ಎನ್ನುವ ಸದುದ್ದೇಶದೊಂದಿಗೆ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಅದನ್ನು ಯುವಜನತೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಭಗವಂತಪ್ಪ ಜಿ.ಬಿ. ಮಾತನಾಡಿ, ಯುವ ಜನಾಂಗದ ಏಳಿಗೆಗಾಗಿ ಇರುವ ಈ ಕಾರ್ಯಕ್ರಮದ ಯಶಸ್ಸಿಗಾಗಿ ಉದ್ಯೋಗ ವಿನಿಮಯ ಕಚೇರಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ನಿಮ್ಮ ಶಿಕ್ಷಣ ಪೂರ್ಣಗೊಂಡ ನಂತರ ಸರ್ಕಾರದ ಯುವ ನಿಧಿ ಹಣವನ್ನು ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ಗ್ಯಾರಂಟಿ ಸಮಿತಿಯ ತಾಲೂಕು ಸದಸ್ಯರಾದ ನಾಗರಾಜ ಸಜ್ಜನರ, ಕಾಲೇಜ್ ಪ್ರಾಚಾರ್ಯ ಸುರೇಶ ಚುರ್ಚಿಹಾಳಮಠ ಮಾತನಾಡಿದರು. ಪಂಚ ಗ್ಯಾರಂಟಿ ಸಮಿತಿಯ ಸದಸ್ಯರಾದ ಉಮೇಶ ಕಲಾಲ, ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಆನಂದ, ಉಪನ್ಯಾಸಕರಾದ ಬಸವರಾಜ ಉಮಚಗಿ, ಜಿ.ಸಿ. ಜೀವಣ್ಣವರ, ಶ್ರುತಿ ಅಂಗಡಿ, ಶೈಲಜಾ ಕಲ್ಮಠ, ಮಲ್ಲೇಶ ಹೊಸಮನಿ, ವೀರೇಶ ಕಾಗನೂರ, ವೀರೇಶ್ ಎನ್., ಇತರರು ಉಪಸ್ಥಿತರಿದ್ದರು. ಸೌಮ್ಯಲತಾ ಜಿ. ಪ್ರಾರ್ಥಿಸಿದರು. ವಿನಯ ಗುಜ್ಜಟ್ಟಿ ಹಾಗೂ ಪ್ರವೀಣ ನಾಯಕ ಕಾರ್ಯಕ್ರಮ ನಿರ್ವಹಿಸಿದರು.