

ಹುಬ್ಬಳ್ಳಿ: ನಶಾ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದೆ. ಅದರಲ್ಲೂ ಯುವ ಸಮುದಾಯವನ್ನು ಸರಿದಾರಿಯತ್ತ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು ಎಂದು ಎಂದು ಎಸ್‌ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಹೇಳಿದರು.
ಎಸ್‌ಎಸ್ ಶೆಟ್ಟರ್ ಫೌಂಡೇಷನ್ ವತಿಯಿಂದ ನಗರದ ಉಣಕಲ್ಲಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜ್‌ನಲ್ಲಿ ಗುರುವಾರ ಏರ್ಪಡಿಸಿದ್ದ ‘ನಶಾ ಮುಕ್ತ ಹುಬ್ಬಳ್ಳಿ ಅಭಿಯಾನ’ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ ತಾಯಿ ಕಷ್ಟಪಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಆದರೆ, ಸರಿಯಾದ ಮಾರ್ಗದರ್ಶನ ಕೊರತೆಯಿಂದ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕೂಡಲೇ ಅವರಿಗೆ ಅಗತ್ಯ ಸಲಹೆ, ಮಾರ್ಗದರ್ಶನ ಅಗತ್ಯ ಎಂದರು.
ವಕೀಲ ಶಿವು ಕೊಪ್ಪದ, ಡಾ. ಅಸಾದುಲ್ಲಾ ಕಾರಿಗಾರ, ಅಶೋಕನಗರ ಠಾಣೆಯ ಪಿಎಸ್‌ಐ ಮಂಜುನಾಥ ಮಾತನಾಡಿದರು. ಇದೇ ವೇಳೆ ನಶಾ ಮುಕ್ತ ಅಭಿಯಾನದ ಬ್ಯಾಡ್ಜ್‌ಗಳನ್ನು ಬಿಡುಗಡೆ ಮಾಡಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸಣ್ಣ ಹೆಬ್ಬಳ್ಳಿ, ಮುಖಂಡರಾದ ಶಿವಪ್ಪ ನಾಗೋಜಿ, ನಿವೃತ್ತ ಪ್ರಾಂಶುಪಾಲ ಉಮೇಶ ಮಿರಜ್ಕರ, ಫೌಂಡೇಷನ್ ಸದಸ್ಯರಾದ ಮಹಾಂತೇಶ ನಾಶಿ, ನಂದೀಶ ವಡ್ಡಟ್ಟಿ, ಅಭಿ ಮುಪರ್ಲಾ, ಸಿದ್ದು ಪರಣ್ಣವರ, ಕಾರ್ತಿಕ ಶೆಟ್ಟಿ, ಚಂದ್ರಶೇಖರ ವಡ್ಡಟ್ಟಿ ಇತರರು ಉಪಸ್ಥಿತರಿದ್ದರು.