

ಹುಬ್ಬಳ್ಳಿ: ಸರ್ಕಾರ ಮತ್ತು ರಾಜಕೀಯ ಚಟುವಟಿಕೆಗಳನ್ನು ಯುವಕರು ಸಮೀಪದಿಂದ ನೋಡಬೇಕು. ಅಲ್ಲದೇ ಅರ್ಥ ಮಾಡಿಕೊಳ್ಳುವ, ವಿಶ್ಲೇಷಿಸುವ ಗುಣ ಬೆಳೆಸಿಕೊಳ್ಳಬೇಕು. ರಾಜಕಾರಣದಿಂದ ಯುವಕರು ದೂರವಿದ್ದಷ್ಟು ದೇಶಕ್ಕೆ ನಷ್ಟ ಎಂಬುದನ್ನು ಅರಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಲಹೆ ನೀಡಿದರು.
ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಎ.ಜಿ.ಎಂ. ಸಮೂಹ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳ ವಿವಿಧ ಕೋರ್ಸ್‌ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ರಾಜಕಾರಣ ಎಂಬುದು ಅನಿವಾರ್ಯ. ಬದಲಾವಣೆ ಬಯಸುವವರು ಮೊದಲು ಬದಲಾವಣೆಯಾಗಬೇಕು. ಯಶಸ್ಸು ಶಿಸ್ತಿನಿಂದ ಮಾತ್ರ ಸಾಧ್ಯ. ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ಶ್ರೇಷ್ಠ. ಕೆಲ ರಾಜಕೀಯ ಪಕ್ಷಗಳು ಹಿಂದು-ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ವರೂರಿನ ಎಜಿಎಂ ಶಿಕ್ಷಣ ಸಂಸ್ಥೆಯು ಹಿಂದು, ಮುಸ್ಲಿಂ, ಕ್ರೈಸ್ತ ಸೇರಿ ಯಾವುದೇ ಧರ್ಮ-ಜಾತಿ ಭೇದ-ಭಾವ ತೋರದೇ ಶಿಕ್ಷಣ ನೀಡುತ್ತಿದೆ. ದೇಶದ ಐಕ್ಯತೆ ಎಂದರೆ ಇದು. ಎಲ್ಲಕ್ಕಿಂತ ಮಿಗಿಲಾದುದು ಮಾನವ ಧರ್ಮ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಂಜಿಎಂ ಸಂಸ್ಥೆಯು ಬಡವರಿಗೆ ಉಚಿತ ಮತ್ತು ರಿಯಾಯಿತಿಯಲ್ಲಿ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ದೇಶದಲ್ಲಿ ಬದಲಾವಣೆ ಯುವಕರಿಂದ ಮಾತ್ರ ಸಾಧ್ಯ. ಸಮಯ ಬಹಳ ಮುಖ್ಯವಾಗಿದ್ದು, ಸದ್ಭಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಇಂದಿನ ದಿನಗಳಲ್ಲಿ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೆಲ ಸುಳ್ಳು ಮಾಹಿತಿಗಳಿಗೆ ಕಿವಿಗೊಡದೆ, ನೈಜ ಸಂಗತಿ ತಿಳಿದು ದೇಶದ ಅವೃದ್ಧಿಗೆ ಕೈಜೋಡಿಸಬೇಕು ಎಂದರು.
ಕೆಲ ಯುವಕರು ದುಶ್ಚಟಗಳಿಗೆ ಬಲಿಯಾಗುವ ಮೂಲಕ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಜನವರಿ ತಿಂಗಳಲ್ಲಿ ವರೂರಿನಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ. ಈ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಲಿದೆ ಎಂದು ಭರವಸೆ ನೀಡಿದರು.
ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸಾಧನೆ ತೋರಿ ಪದವಿ ಪಡೆಯುತ್ತಿರುವುದು ಸಂತಸದ ಸಂಗತಿ. ಪಾಲಕರು ನಿಮ್ಮ ಮೇಲೆ ಅಪಾರ ಆಸೆ, ನಂಬಿಕೆ ಇಟ್ಟುಕೊಂಡಿದ್ದಾರೆ. ಅವರಿಗೆ ನೋವು ತರದೇ ಶಿಕ್ಷಣದಲ್ಲಿ ಸಾಧನೆ ತೋರುವ ಮೂಲಕ ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಬೇಕೆಂದು ಆಶೀರ್ವದಿಸಿದರು.
ಜನವರಿ ತಿಂಗಳಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕಕ್ಕೆ ಅಮೆರಿಕ ಸೇರಿದಂತೆ ಅನ್ಯ ರಾಷ್ಟ್ರಗಳಿಂದ ಸಾವಿರಾರು ಪ್ರಮುಖರು, ಸರ್ವಧರ್ಮದ ಸಾವಿರಾರು ಸ್ವಾಮೀಜಿಗಳು, ರಾಜಕೀಯ ಧುರೀಣರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು.
ಇದೇ ವೇಳೆ ಸಚಿವ ಸಂತೋಷ ಲಾಡ್ ಅವರಿಗೆ ‘ಶ್ರಮಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ವಿವಿಧ ಕೋರ್ಸ್‌ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಎಜಿಎಂ ಸಂಸ್ಥೆ ಅಧ್ಯಕ್ಷ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಸದಾನಂದ ಡಂಗನವರ, ‘ವಿಜಯವಾಣಿ’ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್, ಪತ್ರಕರ್ತರಾದ ಬಂಡು ಕುಲಕರ್ಣಿ, ರಾಹುಲ್ ಬೆಳಗಲಿ, ಗಣ್ಯರಾದ ಮಹೇಂದ್ರ ಸಿಂಘಿ, ಉದಯ ಹಜಾರೆ, ತ್ರಿಶಾಲಾ ಮಾಲಗಿತ್ತಿ, ವಿಮಲ್ ತಾಳಿಕೋಟಿ, ಅನಿಲ ಗುಗ್ಗರಿ, ನಿರ್ದೇಶಕ ಪ್ರೊ. ಸಂದೀಪ ಕ್ಯಾತನವರ, ಪ್ರಾಚಾರ್ಯರಾದ ಡಾ. ಆನಂದ ಕುಲಕರ್ಣಿ, ಎಸ್.ಎ. ಶ್ರೀನಿವಾಸ, ಪುಷ್ಪಾ ಡಂಗನವರ, ಡಾ. ಆಕಾಶ ಕೆಂಭಾವಿ ಇತರರು ಇದ್ದರು.