

ಮಂಡ್ಯ: ಜೀವನದಲ್ಲಿ ಜಿಗುಪ್ಸೆ ಹಾಗೂ ಐಎಎಸ್ ಮಾಡುವ ಕನಸು ನನಸಾಗದ ಹಿನ್ನೆಲೆ ಡೆತ್‌ನೋಟ್ ಬರೆದಿದ್ದು ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕಿ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಕಾವೇರಿ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶ್ರುತಿ(30) ಆತ್ಮಹತ್ಯೆ ಮಾಡಿಕೊಂಡವರು. ಈಕೆ ವಿನಾಯಕ ಬಡಾವಣೆಯ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಕೊಳ್ಳೇಗಾಲ ಮೂಲದ ಮಲ್ಲಪ್ಪ ಎಂಬುವರ ಮಗಳು ಶ್ರುತಿ, ಕಾವೇರಿ ಗ್ರಾಮೀಣ ಬ್ಯಾಂಕ್‌ನ ಉದ್ಯೋಗಿಯಾಗಿ ನೇಮಕಗೊಂಡು ಚಿಕ್ಕಮಗಳೂರಿನ ಶಾಖೆಯಲ್ಲಿ ಕಳೆದ ಏಳು ವರ್ಷ ಕಾರ್ಯನಿರ್ವಹಿಸಿ ಮಂಡ್ಯದ ಪ್ರಾದೇಶಿಕ ಕಚೇರಿಗೆ ಎರಡು ತಿಂಗಳ ಹಿಂದೆ ಬಂದಿದ್ದರು. ಅವಿವಾಹಿತರಾಗಿದ್ದ ಹಿನ್ನೆಲೆಯಲ್ಲಿ ಒಬ್ಬರೇ ವಾಸವಾಗಿದ್ದರು.
ಭಾನುವಾರ ರಾತ್ರಿ 7ರ ಸಮಯದಲ್ಲಿ ತಂದೆ ಮಲ್ಲಪ್ಪ ಅವರಿಗೆ ಕರೆ ಮಾಡಿರುವ ಈಕೆ, ನಾನು ದೇವರ ಬಳಿ ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಹೇಳಿ ಕರೆ ಕಡಿತ ಮಾಡಿದ್ದಾರೆ. ತಂದೆ ವಾಪಸ್ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಮಂಡ್ಯದಲ್ಲಿರುವ ಸಂಬಂಧಿಕರಿಗೆ ವಿಚಾರ ತಿಳಿಸಿದ್ದು, ಅವರು ಮನೆಯ ಬಳಿ ಹೋಗಿ ನೋಡಿದಾಗ ಅಷ್ಟರಲ್ಲಿ ನೇಣು ಬಿಗಿದುಕೊಂಡಿದ್ದರು. ಘಟನೆ ಸಂಬಂಧ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.