

ವಿಜಯವಾಣಿ ಸುದ್ದಿಜಾಲ ಉಡುಪಿ
ತನ್ನ ಪುತ್ರಿ ಜೀನಾ ಮೆರಿಲ್ (19) ಎಂಬಾಕೆಯನ್ನು ಮುಹಮ್ಮದ್ ಅಕ್ರಮ್ ಎಂಬಾತ ಅಪಹರಿಸಿರುವುದಾಗಿ ಕೊಡವೂರು ಗ್ರಾಮದ ಉದ್ದಿನಹಿತ್ಲು ಗ್ರಾಮದ ಗಾಡ್ವಿನ್ ದೇವದಾಸ ಎಂಬವರು ನೀಡಿದ್ದ ದೂರಿಗೆ ಸಂಬಂಧಿಸಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿದೆ. ಆ ಹಿನ್ನೆಲೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದಾಳೆ ಎನ್ನಲಾದ ಯುವತಿ ಏ.4ರಂದು ಹೈಕೋರ್ಟ್ಗೆ ಹಾಜರಾಗಲಿದ್ದಾಳೆ ಎಂದು ಮಾ.29ರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಡಾ. ಅರುಣ ಕೆ. ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಮಾ.20ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಮಾ.19ರಂದು ಜೀನಾ ಮೆರಿಲ್ ಹಾಗೂ ಮುಹಮ್ಮದ್ ಅಕ್ರಂ, ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗುವುದಾಗಿ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ. ಅಲ್ಲದೆ, ತಾವಿಬ್ಬರೂ ಸ್ವಯಂಪ್ರೇರಿತರಾಗಿ ಹೋಗಿದ್ದು, ನಮಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಪತ್ರ ಬರೆದಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದೀಗ ಯುವತಿಯ ಪಾಲಕರು ಮಾ.28ರಂದು ಹೈಕೋರ್ಟ್ನಲ್ಲಿ ತಮ್ಮ ಮಗಳ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಮುಹಮ್ಮದ್ ಅಕ್ರಮ್ ಹಾಗೂ ಯುವತಿಪರ ವಕೀಲರು, ಆಕೆಯನ್ನು ಏ.4ರಂದು ವಿಚಾರಣೆಗಾಗಿ ಹೈಕೋರ್ಟ್ಗೆ ಹಾಜರುಪಡಿಸುವುದಾಗಿ ಹೇಳಿದ್ದಾರೆ. ಆದರೆ, ಈ ಕುರಿತು ಹೈಕೋರ್ಟ್ನಿಂದ ಪೊಲೀಸರಿಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ತಿಳಿಸಿದ್ದಾರೆ.
ಮಾ.28ರಂದು ಯುವತಿಯ ತಾಯಿ ಮೇರುಸ್ ಪುಷ್ಪಲತಾ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ತನ್ನ ಪುತ್ರಿಯನ್ನು ಅಪಹರಣ ಮಾಡಿರುವ ಮುಹಮ್ಮದ್ ಅಕ್ರಮ್ ಮದುವೆಯಾಗಿದ್ದಾನೆ. ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ಈ ಕುರಿತು ದೂರು ನೀಡಿದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಳಲು ವ್ಯಕ್ತಪಡಿಸಿದ್ದರು. ಅಲ್ಲದೆ, ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದರು.