ಪೊಲೀಸರ ನೆರವಿನಿಂದ ಮನೆ ಸೇರಿದ ಯುವಕ

sandeep
Published on

ಕುಮಟಾ: ಸ್ನೇಹಿತರೊಂದಿಗೆ ತಿರುಪತಿಗೆ ತೆರಳಿ ಅಲ್ಲಿ ದಾರಿ ತಪ್ಪಿ ತಮಿಳುನಾಡಿನಲ್ಲಿ ಅನಾರೋಗ್ಯದಿಂದ ಒಬ್ಬಂಟಿಯಾಗಿ ಅಲೆಯುತ್ತಿದ್ದ ತಾಲೂಕಿನ ದೀವಗಿ ಸನಿಹದ ಹರಕಡೆ ಗ್ರಾಮದ ಸಂದೀಪ ಸುಕ್ರು ಗೌಡ(26) ಪೊಲೀಸರ ಸಹಾಯದಿಂದ ಸುರಕ್ಷಿತವಾಗಿ ಸೋಮವಾರ ಮನೆಗೆ ಮರಳಿದ್ದಾನೆ.

ಸೆ. 6ರಂದು ತಿರುಪತಿಗೆ ಸ್ನೇಹಿತರೊಂದಿಗೆ ಹೋಗಿದ್ದ ಸಂದೀಪ ಗೌಡ ಆನಾರೋಗ್ಯದಿಂದಾಗಿ ವಿಶ್ರಾಂತಿಗೃಹದಲ್ಲಿ ಉಳಿದುಕೊಂಡಿದ್ದ. ಉಳಿದ ಸ್ನೇಹಿತರು ದೇವರ ದರ್ಶನಕ್ಕೆ ಹೋಗಿದ್ದರು. ಈ ವೇಳೆ ಊರಿಗೆ ವಾಪಸಾಗಲೆಂದು ಕರ್ನಾಟಕದ ಬದಲು ತಮಿಳುನಾಡಿನ ರೈಲು ಹತ್ತಿ ವೇಲೂರಿನಲ್ಲಿ ಇಳಿದುಕೊಂಡಿದ್ದ. ಅಲ್ಲಿ ಭಾಷೆ ಬಾರದೆ ಐದಾರು ದಿನಗಳಿಂದ ರಸ್ತೆಯ ಬದಿಗೆ ಓಡಾಡಿ ಬಸ್ ನಿಲ್ದಾಣದಲ್ಲಿ ಮಲಗಿದ್ದಾಗ ಅಲ್ಲಿನ ಜನ ಹಾಗೂ ಪೊಲೀಸರು ನೆರವಿಗೆ ಬಂದಿದ್ದಾರೆ.

ಈ ವೇಳೆ ಕುಮಟಾ ಪೊಲೀಸ್ ಠಾಣೆಯ ಎಎಸ್‌ಐ ಮಾರುತಿ ಡಿ. ನಾಯ್ಕ ತಮಿಳುನಾಡು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಅಲ್ಲಿಂದ ಟೂರಿಸ್ಟ್ ವಾಹನದಲ್ಲಿ ಸಂದೀಪ ಗೌಡನನ್ನು ಕುಮಟಾ ಪೊಲೀಸ್ ಠಾಣೆಗೆ ಕರೆತಂದು ಊರಿಗೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net