ಯುವ ಜನಾಂಗ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು

IMG-20241230-WA0207
Published on

ಶ್ರೀ ಸಚ್ಚಿದಾನಂದ ಸ್ವಾಮೀಜಿ ಅಭಿಮತ

ಕೆ.ಆರ್.ಪೇಟೆ : ತಾಲೂಕಿನ ಶರಣ ಶ್ರದ್ಧಾಕೇಂದ್ರವಾದ ಕಾಪನಹಳ್ಳಿ ಗವಿಮಠದ ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಗಳ 15ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಸಾನ್ನಿಧ್ಯ ವಹಿಸಿದ್ದ ಕೆಂಗೇರಿ ಉಪ ನಗರದ ಏಕದಳ ಬಂಡೆ ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಚಂದ್ರಶೇಖರ ಸ್ವಾಮೀಜಿ ಗವಿಮಠದ ಪೀಠಾಧ್ಯಕ್ಷರಾಗಿ ಶ್ರೀಮಠವನ್ನು ಸಮರ್ಥವಾಗಿ ವೈಚಾರಿಕ ನೆಲೆಗಟ್ಟಿನ ಆಧಾರದ ಮೇಲೆ ಶರಣ ಶ್ರದ್ಧಾಕೇಂದ್ರವನ್ನಾಗಿ ಮುನ್ನಡೆಸಿದ್ದಾರೆ. ಸ್ವತಂತ್ರ ಸಿದ್ದಲಿಂಗೇಶ್ವರರು ಜೀವಂತವಾಗಿ ಸಮಾಧಿಯಾಗಿರುವ ಗದ್ದುಗೆಯಿರುವ ಗವಿಮಠವನ್ನು ಬಸವಾದಿ ಶರಣರ ಚಿಂತನೆಗಳು ಹಾಗೂ ಸಂದೇಶಗಳ ಆಧಾರದ ಮೇಲೆ ಮುನ್ನಡೆಸಿ ವಚನಗಳ ಸಾರವನ್ನು ಗ್ರಾಮೀಣ ಜನರಿಗೆ ತಲುಪಿಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ. ಹಾದಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಧರ್ಮದ ದಾರಿಯಲ್ಲಿ ಮುನ್ನಡೆಯುವುದು ಇಂದು ಅಗತ್ಯವಿದೆ. ಈ ನಿಟ್ಟಿನಲ್ಲಿ ಗವಿಮಠದ ಪೀಠಾಧಿಪತಿ ಶ್ರೀ ಚನ್ನವೀರಯ್ಯ ಸ್ವಾಮೀಜಿಗಳು ಗ್ರಾಮೀಣ ಜನರಿಗೆ ಪ್ರವಚನಗಳು ಹಾಗೂ ಧರ್ಮ ಸಂದೇಶದ ಮೂಲಕ ಜಾಗೃತಿ ಮೂಡಿಸಿ ಮುನ್ನಡೆಸುತ್ತಿರುವುದು ಸಂತೋಷ ತಂದಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಟಪ್ಪ ಶೆಟ್ಟಿ, ದಾನಿಗಳಾದ ಗಣಪತಿ ದೇವಸ್ಥಾನ ಚಂದ್ರಶೇಖರ್, ಯುವ ಮುಖಂಡರಾದ ಬಿ.ಎ.ಸುರೇಶ್, ಗದ್ದೆಹೊಸೂರು ಜಗದೀಶ್, ಸೋಮನಾಥ ಪುರದ ಮಹದೇಶ್, ಕಟ್ಟಹಳ್ಳಿ ಪರಮೇಶ್, ಗಂಜಿಗೆರೆ ಮಹೇಶ್, ಬ್ಯಾಂಕ್ ಪರಮೇಶ್ವರ್, ಸಿದ್ದಲಿಂಗೇಶ್ವರ ಬಂಕ್ ಮಂಜಣ್ಣ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net