ಬರವಣಿಗೆ ಸ್ಪಷ್ಟತೆಯಿಂದ ಇರಲಿ

mm 22-16 karayagar
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಪ್ರೊ. ಪಿ.ಜಿ. ತಡಸದ ಉದ್ಘಾಟಿಸಿದರು. ಪೂರ್ಣಿಮಾ ಹಿರೇಮಠ, ಓಂಕಾರ ಕಾಕಡೆ, ತಹಮೀನಾ ಕೋಲಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರಖರತೆ ಮತ್ತು ಸ್ಪಷ್ಟತೆಯಿಂದ ಕೂಡಿದ ಬರವಣಿಗೆಯೇ ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದು ಮಹಿಳಾ ವಿವಿಯ ಐಕ್ಯೂಎಸಿ ನಿರ್ದೇಶಕ ಪ್ರೊ. ಪಿ.ಜಿ. ತಡಸದ ಹೇಳಿದರು.

ನಗರ ಹೊರವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ವುಮೆನ್ ಮೀಡಿಯಾ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಟಿವಿ ಸುದ್ದಿ ಬರವಣಿಗೆ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸುದ್ದಿಯನ್ನು ಜನರ ಹೃದಯಕ್ಕೆ ನೇರವಾಗಿ ತಲುಪಿಸುವುದು ಟಿವಿ ಮಾಧ್ಯಮದ ಮುಖ್ಯ ಉದ್ದೇಶ. ಅದಕ್ಕಾಗಿ ಬಳಸುವ ಭಾಷೆ ಸರಳ, ಸ್ಪಷ್ಟ ಮತ್ತು ಜನರಿಗೆ ಆಕರ್ಷಕವಾಗಿರಬೇಕು. ಪ್ರತಿ ಪದವೂ ಅರ್ಥಪೂರ್ಣವಾಗಿದ್ದು, ಜನರ ಮನಸ್ಸಿನಲ್ಲಿ ಪ್ರಭಾವ ಬೀರುವಂತಿರಬೇಕು. ಭಾಷೆಯ ಶೈಲಿ ಮೃದು, ಸಂವೇದನಾಶೀಲ ಹಾಗೂ ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಟಿವಿ ಬರವಣಿಗೆ ಇಂದು ದೊಡ್ಡ ಸವಾಲಾಗಿ ರೂಪುಗೊಂಡಿದೆ. ಕಾರಣ, ಪ್ರತಿ ಕ್ಷಣವೂ ತ್ವರಿತವಾಗಿ ಬದಲಾಗುತ್ತಿರುವ ಲೋಕದಲ್ಲಿ ನಿಖರ, ಸ್ಪಷ್ಟ ಮತ್ತು ಆಕರ್ಷಕ ಸುದ್ದಿ ತಲುಪಿಸುವ ಹೊಣೆಗಾರಿಕೆ ಮಾಧ್ಯಮದ ಮೇಲಿದೆ. ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಲು ಭಾಷಾ ಕೌಶಲ ಬೆಳೆಸಿಕೊಳ್ಳುವುದು ಅತ್ಯಂತ ಅತ್ಯಗತ್ಯ ಎಂದರು.

ಬೆಂಗಳೂರಿನ ಖಾಸಗಿ ಸುದ್ದಿ ವಾಹಿನಿಯ ಸೀನಿಯರ್ ಕಾಪಿ ಎಡಿಟರ್ ಪೂರ್ಣಿಮಾ ಹೀರೆಮಠ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ ಮತ್ತಿತರರಿದ್ದರು.

ಸುಷ್ಮಾ ಪವಾರ ಸ್ವಾಗತಿಸಿದರು. ಪವಿತ್ರಾ ಕಂಬಾರ ಪರಿಚಯಿಸಿದರು. ಫಿಲೋಮಿನಾ ನಿರೂಪಿಸಿದರು. ಜಯಶ್ರೀ ತಳವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net