

ಕಳಸ: ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ 16ನೇ ವರ್ಷದ ಆದಿಗುರು ಶ್ರೀಪುರಂದರ ದಾಸರು ಹಾಗೂ ಸದ್ಗುರು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ಶುಕ್ರವಾರ ನಡೆಯಿತು. ಬೆಳಗ್ಗೆ ಉಂಛವೃತ್ತಿ ಉತ್ಸವದ ನಂತರದಲ್ಲಿ ಶ್ರೀವಿದ್ವಾನ್ ವಿಶ್ವೇಶ್ವರ ಭಟ್ ಮೀಗಿನಕಲ್ಲು ಆರಾಧನಾ ಮಹೋತ್ಸವ ಉದ್ಘಾಟಿಸಿದರು. ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಕಲ್ಮಾಡಿ ಸದಾಶಿವ ಆಚಾರ್ಯ ಕಾಸರಗೋಡು, ಶರ್ಮಿಳಾರಾವ್ ಉಡುಪಿ, ರಾಜೀವ್ ಪುತ್ತೂರು ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ನಂತರ ಅಪರ್ಣಾ ಜಯರಾಮ್ ಚಿಕ್ಕಮಗಳೂರು ಮತ್ತು ಸರಸ್ವತಿ ಮುನ್ನೂರುಪಾಲ್ ಮತ್ತು ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ಆದಿಗುರು ಶ್ರೀ ಪುರಂದರದಾಸರ ಹಾಗೂ ಸದ್ಗುರು ಶ್ರೀತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಿತು.
ಮಧ್ಯಾಹ್ನದ ನಂತರ ಪುಂಡರಿಕ ಭಾಗವತರು ಹಳುವಳ್ಳಿ ಇವರಿಂದ ಹಾಡುಗಾರಿಕೆ, ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಕಲ್ಮಾಡಿ ಸದಾಶಿವ ಆಚಾರ್ಯ ಕಾಸರಗೋಡು ಇವರಿಂದ ಹಾರ್ಮೋನಿಯಂ ವಾದನ, ನಿಲಯದ ಕಲಾವಿದರಿಂದ ವಾದ್ಯ ವೈವಿಧ್ಯ, ಮದೂರು ಪಿ. ಬಾಲಸುಬ್ರಹ್ಮಣ್ಯಂ ಉಡುಪಿ ಇವರಿಂದ ಹಾಡುಗಾರಿಕೆ, ವಿಶ್ವೇಶ್ವರ ಭಟ್ ಮೀಗಿನಕಲ್ಲು ಬೆಂಗಳೂರು ಇವರಿಂದ ಹಾಡುಗಾರಿಕೆ ನಡಯಿತು. ಪುರಂದರದಾಸರ ಕೀರ್ತನೆಯ ಭಜನಾ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.