

ಜಮಖಂಡಿ: ಜಗತ್ತನ್ನು ಸೃಷ್ಟಿ ಮಾಡಿರುವ ಸರ್ವಶಕ್ತನಾದ ಪರಮಾತ್ಮನು ಎಲ್ಲ ಜೀವಿಗಳ ಹುಟ್ಟು, ಪಾಲನೆ ಮತ್ತು ಮರಣಕ್ಕೆ ಕಾರಣನಾಗಿದ್ದಾನೆ ಎಂದು ಜಮಖಂಡಿಯ ರುದ್ರಾವಧೂತ ಮಠದ ವೇದಾಂತಾಚಾರ್ಯ ಸಹಜಾನಂದ ಅವಧೂತರು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ಶ್ರೀಗುರುದೇವ ಸತ್ಸಂಗ ಬಳಗದ ವತಿಯಿಂದ ಪ್ರತಿ ತಿಂಗಳು ನಾಲ್ಕನೇ ಭಾನುವಾರ ಹಮ್ಮಿಕೊಳ್ಳುವ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನ ‘ಜಗವ ಸುತ್ತಿಪ್ಪುದು ನಿನ್ನಯ ಮಾಯೆ’ ಕುರಿತು ಅನುಭಾವ ಹಂಚಿಕೊಂಡ ಅವರು, ಪರಮಾತ್ಮನು ಚಳಿಗಾಲ, ಬೇಸಿಗೆಕಾಲ ಹಾಗೂ ಮಳೆಗಾಲ ಎಂಬ ಮೂರು ಋತುಮಾನಗಳನ್ನು ಮಾಡಿ, ಬೆಳೆಯ ಕಾಳು ಕಟ್ಟಲು ಚಳಿ ಹಾಗೂ ಕಟ್ಟಿದ ಕಾಳು ಗಟ್ಟಿಯಾಗಲು ಬೇಸಿಗೆ ಒದಗಿಸಿ ಜೀವಿಗಳಿಗೆ ಅಹಾರ ನೀಡಿದ್ದಾನೆ ಎಂದರು.
ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಮಾತನಾಡಿ, ಜಗತ್ತಿನ ಯಾವುದೇ ಭೌತಿಕ ವಸ್ತುಗಳಲ್ಲಿ ಸುಖ, ಸಂತೋಷವಿಲ್ಲ. ಮಾಯೆ ನಮ್ಮನ್ನು ಸುಖವಾಗಿ ಇರಲು ಬಿಡುವುದಿಲ್ಲ. ಆದರೆ, ದುಃಖ ಕಡಿಮೆ ಮಾಡಿಕೊಳ್ಳಲು ಸತ್ಸಂಗ ಬೇಕು. ಆತ್ಮ ಸಂಬಂಧವನ್ನು ಒಂದು ಮಾಡಿ, ದೇಹ ಸಂಬಂಧವನ್ನು ದೂರ ಮಾಡಿ, ಆತ್ಮಭಾವವನ್ನು ಹೆಚ್ಚಿಸಿಕೊಳ್ಳಲು ಸತ್ಸಂಗದ ಅವಶ್ಯಕತೆ ಇದೆ ಎಂದು ಆಶೀರ್ವಚನ ನೀಡಿದರು.
ರುದ್ರಾವಧೂತ ಮಠದ ಕಷ್ಣಾನಂದ ಅವಧೂತರು ಆಶೀರ್ವಚನ ನೀಡಿದರು. ಸಿದ್ದಾಪುರ ಮಠದ ಮಾತೋಶ್ರೀ ಮಹಾದೇವಿ ಅಕ್ಕನವರು ಸಾನ್ನಿಧ್ಯ ವಹಿಸಿದ್ದರು. ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಮಹಾಪ್ರಸಾದ ದಾಸೋಹ ವ್ಯವಸ್ಥೆ ಮಾಡಿದ ಮರೇಗುದ್ದಿಯ ರಾಚಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು.
ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ(ತಬಲಾ), ಶಿವಾನಂದ ಬಾಡನವರ(ಹಾರ್ಮೊನಿಯಂ), ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.