

ಯಲ್ಲಾಪುರ: ಸಾವರ್ಕರ್ ಅವರಂತಹ ಸಾವಿರಾರು ದೇಶಭಕ್ತರ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸಾವರ್ಕರ್ ಕುರಿತಾದ ನೈಜ ಕಥೆಯನ್ನು ಕಾಂಗ್ರೆಸ್ ಮುಚ್ಚಿಟ್ಟಿತ್ತು. ಆದರೆ, ಈಗ ವಾಸ್ತವಿಕತೆಯನ್ನು ದೇಶದೆದುರು ತೆರೆದಿಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ವೀರಸಾವರ್ಕರ್ ಪ್ರತಿಮೆ ಅನಾವರಣ ಮತ್ತು ಸಾವರ್ಕರ್ ಚಿಂತನೆಗಳ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಜ್ಞಾನವನ್ನು ಜಗತ್ತು ಬಯಸುತ್ತಿದೆ. ಕಳೆದ 10 ವರ್ಷಗಳಿಂದ ಜಗತ್ತಿನ ಮುಂದೆ ತಲೆಯೆತ್ತಿ ನಿಲ್ಲುವಂತೆ ಮೋದಿ ನೇತೃತ್ವದ ಸರ್ಕಾರ ಮಾಡಿದೆ. ಮೋದಿ ದೇಶದ ಸಮಗ್ರತೆ, ಸಮಾನತೆಯ ಚಿಂತನೆಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದರು.
ಮುಖ್ಯ ವಕ್ತಾರರಾದ ಕಾರ್ಕಳದ ಆದರ್ಶ ಗೋಖಲೆ ಮಾತನಾಡಿ, ದೇಶದ ಭವಿಷ್ಯದ ಸಮಸ್ಯೆಗಳ ಕುರಿತು ಹಿಂದೆಯೇ ಸಾವರ್ಕರ್ ಕಠಿಣ ಮಾತಿನಲ್ಲಿ ಸ್ಪಷ್ಟಪಡಿಸಿದ್ದರು ಎಂದು ವಿಸ್ತೃತವಾಗಿ ಸಾವರ್ಕರ್ ಕುರಿತಾದ ಚಿಂತನೆಯನ್ನು ಮಂಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅವರು ಹರಿಪ್ರಕಾಶ ಕೋಣೆಮನೆ ಸಂಪಾದಿಸಿದ ಸಾವರ್ಕರ್ ಸಂದೇಶ ಎಂಬ ಗ್ರಂಥವನ್ನು ಬಿಡುಗಡೆಗೊಳಿಸಿದರು.
ಕೃತಿಕಾರ, ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ವಜ್ರಳ್ಳಿಯಲ್ಲಿ ಸಾವರ್ಕರ್ ಪ್ರತಿಮೆ ಅನಾವರಣಗೊಳ್ಳಲು ಗ್ರಾ.ಪಂ. ಅನುಮತಿ ನೀಡದೇ ತೊಂದರೆ ನೀಡುತ್ತಿದೆ. ಆದರೆ, ನಾವು ಸಾವರ್ಕರ್ ಚಿಂತನೆಯನ್ನು ಮನೆಮನೆಗೆ ತಲುಪಿಸಲು ಮುಂದಾಗಿದ್ದೇವೆ ಎಂಬುದು ತಿಳಿದ ತಾಲೂಕಿನ ಆಡಳಿತ ವ್ಯವಸ್ಥೆ ಪ್ರತಿಮೆ ಅನಾವರಣಕ್ಕೆ ಅನುಮತಿ ನೀಡುವ ಚಿಂತನೆ ನಡೆಸಿದೆ. ಸಾವರ್ಕರ್ ಮುಸ್ಲೀಂ ಮತಾಂಧತೆ ವಿರೋಧಿಸಿದ್ದರು ಎನ್ನುವುದೇ ಅವರ ಕುರಿತು ಕಾಂಗ್ರೆಸ್ ಪಕ್ಷ ವಿರೋಧ ತಳೆಯಲು ಕಾರಣವಾಗಿದೆ ಎಂದರು.
ವಕೀಲ ನಾಗರಾಜ ನಾಯಕ, ಉದ್ಯಮಿ ರಾಮಕೃಷ್ಣ ಹೆಬ್ಬಾರ ಮಾತನಾಡಿದರು. ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿ ಅಧ್ಯಕ್ಷ ಗಣಪತಿ ಭಟ್ಟ ನಡಿಗೆಮನೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಭಾರತಿ ಭಟ್ಟ ಅಗ್ಗಾಶಿಕುಂಬ್ರಿ, ಪ್ರಪುಲ್ ಹೆಬ್ಬಾರ ಪ್ರಾರ್ಥಿಸಿದರು. ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿ ಅಧ್ಯಕ್ಷ ವಿ.ಎನ್. ಭಟ್ಟ ನಡಿಗೆಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಸದಸ್ಯ ಮಹೇಶ ಗಾಂವ್ಕರ ನಿರ್ವಹಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ವಂದಿಸಿದರು.