ಕಣ್ಣು ತೆರೆಯದ ಜಾನಪದ ಜಗತ್ತು

New Story new
Published on

ಹುಬ್ಬಳ್ಳಿ : ಜಾನಪದ ಕಲೆ, ಕಲಾವಿದರ ಉತ್ತೇಜನಕ್ಕೆ ಹುಬ್ಬಳ್ಳಿಯಲ್ಲಿ ಜಾನಪದ ಜಗತ್ತು ನಿರ್ಮಾಣ ಮಾಡಬೇಕೆಂಬ ದಶಕದ ಕನಸು ಇನ್ನೂ ಕನಸಾಗಿಯೇ ಉಳಿದಿದೆ.ಜಾನಪದ ಜಗತ್ತು ನಿರ್ಮಾಣ ಮಾಡುವುದಕ್ಕಾಗಿಯೇ ನೃಪತುಂಗ ಬೆಟ್ಟದ ಪಿರಾಮಿಡ್​ ಹಿಂಭಾಗದಲ್ಲಿ 5.20 ಎಕರೆ ಜಮೀನು ಮೀಸಲಿಟ್ಟು ದಶಕವೇ ಕಳೆದಿದೆ. ಆದರೆ, ಇದುವರೆಗೂ ಇಲ್ಲಿ ಜಾನಪದ ಜಗತ್ತು ಕಣ್ಣು ತೆರೆಯಲೇ ಇಲ್ಲ.

ಬಯಲಾಟ, ದೊಡ್ಡಾಟ ಮತ್ತಿತರ ಜಾನಪದ ಕಲೆಗಳ ಪ್ರದರ್ಶನ, ತರಬೇತಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಉತ್ತೇಜನ ಕೊಡಬೇಕು. ಉತ್ತರ ಕರ್ನಾಟಕದ ಹೆಬ್ಬಾಗಿಲಾದ ಹುಬ್ಬಳ್ಳಿಯಲ್ಲಿಯೇ ಈ ಎಲ್ಲ ಚಟುವಟಿಕೆಗಳು ನಡೆಯಬೇಕೆಂಬ ಜಾನಪದ ಕಲಾವಿದರ ಒತ್ತಾಸೆ ಮೇರೆಗೆ ಜಗದೀಶ ಶೆಟ್ಟರ್​ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾನಪದ ಜಗತ್ತಿಗಾಗಿ ಜಮೀನು ಮೀಸಲಿಟ್ಟಿದ್ದರು.

ಅಷ್ಟೇ ಅಲ್ಲ, 75 ಲಕ್ಷ ರೂ.ಗಳನ್ನೂ ಬಿಡುಗಡೆಗೊಳಿಸಿದ್ದರು. ಅಂದಿನ ಸಿಎಂ ಜಗದೀಶ ಶೆಟ್ಟರ್​, ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಈಗಿನ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಜಾನಪದ ಜಗತ್ತು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು.

ಸರ್ಕಾರ ಬಿಡುಗಡೆಗೊಳಿಸಿದ್ದ 75 ಲಕ್ಷ ರೂ. ವೆಚ್ಚದಲ್ಲಿ ಸುತ್ತಲೂ ಕಂಪೌಂಡ್​ ನಿಮಿರ್ಸಲಾಗಿದೆ. ಆಡಳಿತ ಕಚೇರಿ ನಿರ್ಮಾಣಕ್ಕಾಗಿ ಪ್ರಾರಂಭಿಸಿದ್ದ ಕಾಮಗಾರಿ ಅರ್ಧಕ್ಕೇ ನಿಂತಿದ್ದು, ಸುತ್ತಲೂ ಗಿಡಗಂಟೆಗಳು ಬೆಳೆದಿವೆ.

ಸುಮಾರು 15&20 ಕೋಟಿ ರೂ. ವೆಚ್ಚದಲ್ಲಿ ಜಾನಪದ ಕಲೆಗಳ ತರಬೇತಿ ಕೇಂದ್ರ, ಜಾನಪದ ಕಲೆಗಳ ಪ್ರದರ್ಶನ ಸಭಾಂಗಣ, ಜಾನಪದ ಕಲಾವಿದರ ಮಕ್ಕಳಿಗಾಗಿ 1 ರಿಂದ 10ನೇ ತರಗತಿವರೆಗೆ ವಸತಿ ಸಹಿತ ಶಾಲೆ ನಿಮಿರ್ಸುವ ಉದ್ದೇಶವೂ ಇತ್ತು.

ಆದರೆ, ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಜಾನಪದ ಜಗತ್ತು ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲೇ ಇಲ್ಲ.

ಜಗದೀಶ ಶೆಟ್ಟರ್​ ಅವಧಿ ನಂತರ ಸಿದ್ದರಾಮಯ್ಯ ಎರಡು ಬಾರಿ (ಹಾಲಿ ಸಿಎಂ), ಬಿ.ಎಸ್​. ಯಡಿಯೂರಪ್ಪ ಎರಡು ಬಾರಿ, ಎಚ್​.ಡಿ. ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ತಲಾ ಒಂದು ಬಾರಿ ಮುಖ್ಯಮಂತ್ರಿ ಆದರು. ಆದರೂ, ಹುಬ್ಬಳ್ಳಿಯಲ್ಲಿ ಜಾನಪದ ಜಗತ್ತು ನಿರ್ಮಾಣಕ್ಕೆ ಯಾರೊಬ್ಬರೂ ಇಚ್ಛಾಶಕ್ತಿ ತೋರದಿರುವುದು ದುರ್ದೈವದ ಸಂಗತಿ.

ಇದೀಗ, ಜಾನಪದ ಜಗತ್ತಿಗೆ ಮೀಸಲಿಟ್ಟಿರುವ 5.20 ಎಕರೆ ಜಾಗದ ಪೈಕಿ 1 ಅಥವಾ ಒಂದೂವರೆ ಎಕರೆ ಜಾಗದಲ್ಲಿ ಕರ್ನಾಟಕ ಏಕೀಕರಣದ ಹೋರಾಟಗಾರ ಅದರಗುಂಚಿ ಶಂಕರಗೌಡರ ಪ್ರತಿಷ್ಠಾನ ನಿಮಿರ್ಸಲು ಸರ್ಕಾರ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಅದರಗುಂಚಿ ಶಂಕರಗೌಡರ ಅವರ ಪುತ್ಥಳಿ ಮತ್ತು ಸ್ಮಾರಕ ಭವನವನ್ನು ಇಲ್ಲಿ ನಿಮಿರ್ಸುವ ಉದ್ದೇಶ ಇದೆ. ಈ ಸ್ಮಾರಕ ಭವನದಲ್ಲಾದರೂ ಜಾನಪದ ಚಟುವಟಿಕೆಗಳನ್ನು ನಡೆಸುವ ಆಶಯ ಹೊಂದಿದ್ದಾರೆ ಜಾನಪದ ಕಲಾವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net